Search


ಮಗನ ಮರಣೋತ್ತರ ಕೀರ್ತಿ ಚಕ್ರ ಪಡೆಯುವ ವೇಳೆ ಕಣ್ಣೀರಿಟ್ಟ ಹುತಾತ್ಮ ಯೋಧನ ತಾಯಿ..!

ನವದೆಹಲಿ: ನಿನ್ನೆ (ಜೂನ್‌.8) ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಭಾರತೀಯ ವೀರ ಯೋಧರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇನಾ ಪದಕಗಳನ್ನ ಪ್ರಧಾನ ಮಾಡಿದ್ದಾರೆ.  ಈ ವೇಳೆ ಮರಣೋತ್ತರ ಕೀರ್ತಿ ಚಕ್ರ ಪಡೆಯುವಾಗ ಹುತಾತ್ಮ ಯೋಧರ ತಾಯಿಯೊಬ್ಬರು ಕಣ್ಣೀರಿಟ್ಟಿದ್ದು, ರಾಷ್ಟ್ರಪತಿಗಳು ಅವರನ್ನ ಅಪ್ಪಿಕೊಂಡ ಸಮಾಧಾನ ಪಡಿಸಿದ ದೃಷ್ಯ ನೆರೆದಿದ್ದವರ ಕಣ್ಣಾಲಿಗಳಲ್ಲಿ ನೀರೂರುವಂತೆ ಮಾಡಿದೆ. ಈ ಕುರಿತಾದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ದೇಶ ಸೇವೆ ಮಾಡಿದ ವೀರ ಯೋಧರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಕೀರ್ತಿ ಚಕ್ರ, ವೀರ ಚಕ್ರ, ಶೌರ್ಯ ಚಕ್ರ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಈ ವೇಳೆ ಮರಣೋತ್ತರ ಪ್ರಶಸ್ತಿಯನ್ನು ಸ್ವೀಕರಿಸುವಾಗ ಆ ಸೈನಿಕರ ಕುಟುಂಬಸ್ಥರು ಕಣ್ಣೀರಿಟ್ಟ ದೃಶ್ಯಗಳು ನೋಡುಗರನ್ನು ಕೂಡ ಭಾವುಕರನ್ನಾಗಿಸಿದವು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸಿಪಾಯಿ ಜಂಜಾಲ್ ಪ್ರವೀಣ್ ಪ್ರಭಾಕರ್ ಅವರ ತಾಯಿಯು ತಮ್ಮ ಮಗನ ಪರವಾಗಿ ‘ಕೀರ್ತಿ ಚಕ್ರ’ ಪ್ರಶಸ್ತಿಯನ್ನು ಸ್ವೀಕರಿಸಿದ ಕ್ಷಣ ಇಡೀ ದೇಶವನ್ನೇ ಭಾವುಕಗೊಳಿಸಿದೆ.

ಉಗ್ರ ನಿಗ್ರಹ ಕಾರ್ಯಚರಣೆ ವೇಳೆ ಹುತಾತ್ಮರಾಗಿದ್ದ ಪ್ರವೀಣ್‌ ಪ್ರಭಾಕರ್‌..!

ಜುಲೈ 6, 2024ರಂದು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ವೇಳೆ ಅಪ್ರತಿಮ ಧೈರ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದ್ದ ಸಿಪಾಯಿ ಪ್ರವೀಣ್ ಪ್ರಭಾಕರ್, ಇಬ್ಬರು ಉಗ್ರರನ್ನು ಹತ್ಯೆಗೈದು ವೀರಮರಣ ಅಪ್ಪಿದ್ದರು. ಅವರ ಈ ಸಾಹಸ ಮತ್ತು ದೇಶಕ್ಕಾಗಿ ನೀಡಿದ ಬಲಿದಾನವನ್ನು ಭಾರತವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಮರಣೋತ್ತರ ಕೀರ್ತಿ ಚಕ್ರ ಪ್ರಶಸ್ತಿ ನೀಡಲಾಗಿದೆ. ಈ ವೇಳೆ ಅವರ ತಾಯಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಗಲಿಗೊರಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅವರನ್ನು ರಾಷ್ಟ್ರಪತಿ ಸಾಂತ್ವನಗೊಳಿಸಿದ್ದಾರೆ.

By Ravikumar - 09-06-2026


Ads in Post