ಬೆಂಗಳೂರು: ನಟ ದುನಿಯಾ ವಿಜಯ್ ಮಾಧ್ಯಮಗಳ ಜೊತೆ ಮಗನ ಹಲ್ಲೆ ಪ್ರಕರಣ ಮತ್ತು ಪತ್ನಿಯೊಂದಿಗಿನ ವಿಚ್ಚೆದನದ ಕುರಿತು ಮೊದಲ ಬಾರಿಗೆ ಮಾತನಾಡಿದ್ದಾರೆ. ನಾನು ವಿಷಕಂಠ, ಎಲ್ಲವನ್ನೂ ನುಂಗಿ ಸಹಿಸಿಕೊಳ್ಳುತ್ತೇನೆ ಎಂದು ನಟ ದುನಿಯಾ ವಿಜಯ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ದುನಿಯಾ ವಿಜಯ್, ತಮ್ಮ ಕುಟುಂಬ ಹಾಗೂ ಮಗನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ಕುಟುಂಬದ ವಿಚಾರವಾಗಿ ನಾನು ಹೆಚ್ಚಿನದನ್ನು ಮಾತನಾಡಲು ಸಾಧ್ಯವಿಲ್ಲ. ನನ್ನ ಸಾಂಸಾರಿಕ ಜೀವನದ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೇನೆ. ಅದರಲ್ಲಿ ಎಲ್ಲ ವಿಚಾರಗಳನ್ನೂ ಹಾಗೂ ಮಕ್ಕಳ ಬಗ್ಗೆ ನನ್ನ ಅಭಿಪ್ರಾಯವನ್ನೂ ತಿಳಿಸಿದ್ದೇನೆ ಎಂದು ಹೇಳಿದರು.
ಮಗನ ವಿರುದ್ಧ ದಾಖಲಾಗಿರುವ ಪ್ರಕರಣದ ಕುರಿತು ಮಾತನಾಡಿದ ಅವರು, “ಮಗನೇ ಆಗಿದ್ದರೂ ತಪ್ಪು ಮಾಡಿದರೆ ತಪ್ಪೇ. ಕಾನೂನು ತನ್ನ ಕೆಲಸವನ್ನು ಮಾಡುತ್ತದೆ. ನಾನು ವಿಷಕಂಠ, ಎಲ್ಲವನ್ನೂ ನುಂಗಿ ಸಹಿಸಿಕೊಳ್ಳುತ್ತೇನೆ” ಎಂದು ಹೇಳಿದರು. ಮಗನೊಂದಿಗೆ ಮಾತನಾಡಿದ್ದು, ಅಗತ್ಯ ತಿಳುವಳಿಕೆ ಮತ್ತು ಬುದ್ಧಿವಾದ ಹೇಳಿದ್ದೇನೆ ಎಂದ ವಿಜಯ್, “ಮಕ್ಕಳು ಅಂದರೆ ಸಣ್ಣಪುಟ್ಟ ಜಗಳಗಳು ಇರುವುದು ಸಹಜ. ಅದು ಎಲ್ಲರ ಜೀವನದಲ್ಲೂ ನಡೆಯುತ್ತದೆ. ನಾನೂ ಮಗನಿಗೆ ಬುದ್ಧಿ ಹೇಳಿದ್ದೇನೆ” ಎಂದರು.
ಇತ್ತೀಚೆಗೆ ವಿಚ್ಛೇದನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದ ದುನಿಯಾ ವಿಜಯ್, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡದಿರಲು ಮನವಿ ಮಾಡಿಕೊಂಡಿದ್ದರು. “ನನಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಅವರಿಗೆ ಯಾವುದೇ ರೀತಿಯ ಮುಜುಗರವಾಗಬಾರದು. ಇಲ್ಲಿಂದ ಹೊಸ ಬದುಕಿನ ಪ್ರಯಾಣದತ್ತ ಹೆಜ್ಜೆ ಹಾಕುತ್ತಿದ್ದೇನೆ. ಈ ವಿಚಾರದ ಬಗ್ಗೆ ಮಾಧ್ಯಮಗಳಲ್ಲಾಗಲಿ ಅಥವಾ ಸಾರ್ವಜನಿಕವಾಗಿ ಆಗಲಿ ಮಾತನಾಡಲು ಇಚ್ಛಿಸುವುದಿಲ್ಲ” ಎಂದು ಅವರು ಕಳಕಳಿಯಾಗಿ ಮನವಿ ಮಾಡಿಕೊಂಡಿದ್ದರು.