Search


ಮೈಸೂರು ದಸರಾ ಗಜಪಯಣಕ್ಕೆ ಚಾಲನೆ: ಮೊದಲ ಹಂತದಲ್ಲಿ 9 ಆನೆಗಳ ಆಗಮನ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಪೂರ್ವಭಾವಿ ಕಾರ್ಯಕ್ರಮವಾದ ಗಜಪಯಣಕ್ಕೆ ಇಂದು (ಆ.26) ಚಾಲನೆ ದೊರೆತಿದೆ. ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಿಂದ ಮೊದಲ ಹಂತದ ಗಜಪಯಣ ಆರಂಭವಾಗಿದ್ದು, ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳ ಬಳಿಕ ಗಜಪಡೆಯನ್ನು ಮೈಸೂರಿನತ್ತ ಕರೆತರಲಾಗುತ್ತಿದೆ.

ಈ ಬಾರಿ ಮೊದಲ ಹಂತದಲ್ಲಿ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಕಾವೇರಿ, ಮಹೇಂದ್ರ, ಲಕ್ಷ್ಮೀ ಹಾಗೂ ಏಕಲವ್ಯ ಸೇರಿದಂತೆ 9 ಆನೆಗಳು ಮೈಸೂರಿಗೆ ಆಗಮಿಸಲಿವೆ. ಎರಡನೇ ಹಂತದಲ್ಲಿ ರೂಪ, ಚೈತ್ರ ಹಾಗೂ ಶ್ರೀಕಂಠ ಆನೆಗಳು ಬರಲಿವೆ.

2020ರಿಂದ ಸತತ ಆರು ವರ್ಷಗಳ ಕಾಲ ದಸರಾ ಜಂಬೂಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊತ್ತಿದ್ದ ಅಭಿಮನ್ಯು ಆನೆಗೆ ಈ ಬಾರಿ ವಿಶ್ರಾಂತಿ ನೀಡಲಾಗಿದೆ. 60 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಅಂಬಾರಿ ಹೊರುವ ಜವಾಬ್ದಾರಿಯಿಂದ ಅಭಿಮನ್ಯುವನ್ನು ಹೊರಗಿಡಲಾಗಿದೆ. ಅಭಿಮನ್ಯುವಿನ ಬದಲಿಗೆ ಈ ಬಾರಿ ಅಂಬಾರಿ ಹೊರುವ ಜವಾಬ್ದಾರಿಗೆ ಧನಂಜಯ, ಮಹೇಂದ್ರ, ಪ್ರಶಾಂತ ಹಾಗೂ ಏಕಲವ್ಯ ಸೇರಿದಂತೆ ಹಲವು ಆನೆಗಳನ್ನು ಪರಿಗಣಿಸಲಾಗಿದ್ದು, ತಾಲೀಮು ಹಾಗೂ ಪರೀಕ್ಷೆಗಳ ಬಳಿಕ ಅಂತಿಮ ಆಯ್ಕೆ ನಡೆಯಲಿದೆ.

ಮೊದಲ ಹಂತದ ಗಜಪಡೆ ಆಗಸ್ಟ್ 28ರಂದು ಮೈಸೂರು ಅರಮನೆಗೆ ಪ್ರವೇಶಿಸಲಿದೆ. ನಂತರ ಆನೆಗಳಿಗೆ ವಿವಿಧ ಹಂತದ ತಾಲೀಮುಗಳನ್ನು ನೀಡಲಾಗುತ್ತದೆ. ಅಕ್ಟೋಬರ್ 11ರಂದು ಮೈಸೂರು ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ಸಿಗಲಿದ್ದು, ಅಕ್ಟೋಬರ್ 21ರಂದು ವಿಜಯದಶಮಿ ದಿನ ಜಂಬೂಸವಾರಿ ನಡೆಯಲಿದೆ. ನಾಡಹಬ್ಬದ ಜಂಬೂಸವಾರಿಗೆ ಗಜಪಡೆ ಸಜ್ಜಾಗುತ್ತಿದ್ದು, ಈ ಬಾರಿ ಹೊಸ ಅಂಬಾರಿ ಸಾರಥಿ ಯಾರು ಎಂಬ ಕುತೂಹಲವೂ ಹೆಚ್ಚಾಗಿದೆ.

By Ravikumar - 26-08-2026


Ads in Post