Search


ಮೈಸೂರು ದಸರಾ 2026: ಉದ್ಘಾಟಕರಾಗಿ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಆಯ್ಕೆ

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ 2026ರ ಉದ್ಘಾಟಕರು ಯಾರು ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಕೊಪ್ಪಳದ ಗವಿಸಿದ್ದೇಶ್ವರ ಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಯವರನ್ನು ಈ ಬಾರಿಯ ದಸರಾ ಉದ್ಘಾಟಕರಾಗಿ ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ವಿಧಾನಸಭೆಯಲ್ಲಿ ಈ ವಿಷಯವನ್ನು ಘೋಷಿಸಿದ್ದಾರೆ.

ಅಕ್ಟೋಬರ್ 11ರಂದು ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ಮೈಸೂರು ದಸರಾಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ವಿಜಯದಶಮಿ ಜಂಬೂಸವಾರಿ ಅಕ್ಟೋಬರ್ 21ರಂದು ನಡೆಯಲಿದೆ. ಅಂದು ಸಂಜೆ 4:10ಕ್ಕೆ ಮೀನ ಲಗ್ನದಲ್ಲಿ ನಡೆಯಲಿರುವ ಜಂಬೂಸವಾರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪುಷ್ಪಾರ್ಚನೆ ನೆರವೇರಿಸುವ ಮೂಲಕ ಚಾಲನೆ ನೀಡಲಿದ್ದಾರೆ.

ಈ ಬಾರಿ ಮೈಸೂರು ದಸರಾವನ್ನು ಅದ್ಧೂರಿಯಾಗಿ ಮಾತ್ರವಲ್ಲದೆ, ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಾಡಹಬ್ಬದ ಸಡಗರದಲ್ಲಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳ ಮೂಲಕ ದಸರಾ ಮಹೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಲು ಸಿದ್ಧತೆ ನಡೆಸಲಾಗುತ್ತಿದೆ.

ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ ಮಠದ 18ನೇ ಪೀಠಾಧಿಪತಿಗಳಾಗಿರುವ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು ತಮ್ಮ ಸಾಮಾಜಿಕ ಕಳಕಳಿ, ಸರಳತೆ ಹಾಗೂ ದಾಸೋಹ ಪರಂಪರೆಯ ಮೂಲಕ ನಾಡಿನಾದ್ಯಂತ ಗಮನ ಸೆಳೆದಿದ್ದಾರೆ. ಸಮಾಜಮುಖಿ ಕಾರ್ಯಗಳಿಗಾಗಿ ಅವರು ‘ನಡೆದಾಡುವ ದೇವರು’ ಹಾಗೂ ‘ಜಲಋಷಿ’ ಎಂಬ ಗೌರವದ ಹೆಸರಿನಿಂದಲೂ ಪ್ರಸಿದ್ಧರಾಗಿದ್ದಾರೆ.

By Ravikumar - 24-09-2026


Ads in Post