ಜೂನ್ 4, ಮೈಸೂರು ಸಂಸ್ಥಾನದ ಅತ್ಯಂತ ಜನಪ್ರಿಯ ಮತ್ತು ದಾರ್ಶನಿಕ ರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನ. ಮಹಾತ್ಮಾ ಗಾಂಧೀಜಿಯವರಿಂದ 'ರಾಜರ್ಷಿ' ಎಂದು ಕರೆಸಿಕೊಂಡ ಇವರ ಆಡಳಿತಾವಧಿಯನ್ನು ಮೈಸೂರಿನ 'ಸುವರ್ಣ ಯುಗ' ಎಂದು ಕರೆಯಲಾಗುತ್ತದೆ.
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್: ಮೈಸೂರಿನ ಸುವರ್ಣ ಯುಗದ ರೂವಾರಿ..!
ಜನನ ಮತ್ತು ಆರಂಭಿಕ ಜೀವನ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜೂನ್ 4, 1884 ರಂದು ಮೈಸೂರು ಅರಮನೆಯಲ್ಲಿ ಜನಿಸಿದರು. ಇವರ ತಂದೆ ಮಹಾರಾಜ ಚಾಮರಾಜ ಒಡೆಯರ್ ಮತ್ತು ತಾಯಿ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ. ತಂದೆಯ ನಿಧನದ ನಂತರ, 1902 ರಲ್ಲಿ ಅವರು ಮೈಸೂರಿನ 24 ನೇ ಮಹಾರಾಜರಾಗಿ ಅಧಿಕಾರ ವಹಿಸಿಕೊಂಡರು.
ಚಿರಸ್ಥಾಯಿಯಾದ ಪ್ರಮುಖ ಕಾರ್ಯಗಳು..!
ಜನಪರ ಮತ್ತು ಅಭಿವೃದ್ಧಿ ಕೆಲಸಗಳು:ಒಡೆಯರ್ ಅವರು ತಮ್ಮ ದಿವಾನರಾದ ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಮಿರ್ಜಾ ಇಸ್ಮಾಯಿಲ್ ಅವರೊಂದಿಗೆ ಸೇರಿ ಮೈಸೂರನ್ನು ಆಧುನಿಕ ಮಾದರಿ ರಾಜ್ಯವಾಗಿ ಪರಿವರ್ತಿಸಿದರು.
ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ: ದೇಶದಲ್ಲೇ ಮೊದಲ ಬಾರಿಗೆ ಪ್ರಾಥಮಿಕ ಶಿಕ್ಷಣವನ್ನು ಉಚಿತ ಮತ್ತು ಕಡ್ಡಾಯಗೊಳಿಸಿದರು. 1921 ರಲ್ಲಿ ಮಿಲ್ಲರ್ ಸಮಿತಿ ಶಿಫಾರಸಿನ ಮೇರೆಗೆ ಹಿಂದುಳಿದ ವರ್ಗಗಳಿಗೆ ಉದ್ಯೋಗ ಮೀಸಲಾತಿ ಜಾರಿಗೆ ತಂದರು. ಮಹಿಳೆಯರಿಗೆ ಮತದಾನದ ಹಕ್ಕು ನೀಡಿದರು.
ಕೈಗಾರಿಕೆ ಮತ್ತು ಬ್ಯಾಂಕಿಂಗ್: ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಹಾಗೂ 1913 ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸ್ಥಾಪಿಸಿದರು.
ನೀರಾವರಿ ಮತ್ತು ವಿದ್ಯುತ್: ರೈತರಿಗಾಗಿ ಏಷ್ಯಾದಲ್ಲೇ ಅತಿ ದೊಡ್ಡದಾದ ಕೃಷ್ಣರಾಜ ಸಾಗರ (KRS) ಅಣೆಕಟ್ಟನ್ನು ನಿರ್ಮಿಸಿದರು. ಶಿವನಸಮುದ್ರದಲ್ಲಿ ಜಲವಿದ್ಯುತ್ ಯೋಜನೆ ಆರಂಭಿಸಿ, ಬೆಂಗಳೂರಿಗೆ ಏಷ್ಯಾದಲ್ಲೇ ಮೊದಲ ಬಾರಿಗೆ ವಿದ್ಯುತ್ ದೀಪದ ಸೌಲಭ್ಯ ನೀಡಿದರು.
ಸಂಸ್ಥೆಗಳ ಸ್ಥಾಪನೆ: ಮೈಸೂರು ವಿಶ್ವವಿದ್ಯಾನಿಲಯ (1916), ಕನ್ನಡ ಸಾಹಿತ್ಯ ಪರಿಷತ್ತು (1915), ಮತ್ತು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಗೆ ಉಚಿತ ಭೂಮಿ ಹಾಗೂ ಧನಸಹಾಯ ನೀಡಿದರು.
ನಿಧನ :ತಮ್ಮ ಇಡೀ ಜೀವನವನ್ನು ಪ್ರಜೆಗಳ ಕಲ್ಯಾಣಕ್ಕಾಗಿ ಮುಡುಪಾಗಿಟ್ಟ ಈ ಮಹಾನ್ ಚೇತನ ಆಗಸ್ಟ್ 3, 1940 ರಂದು ಇಹಲೋಕ ತ್ಯಜಿಸಿತು.
ಇಂದು ಕರ್ನಾಟಕ ಅನುಭವಿಸುತ್ತಿರುವ ನೀರಾವರಿ, ಶಿಕ್ಷಣ, ಕೈಗಾರಿಕೆ ಮತ್ತು ಸಾಮಾಜಿಕ ಸಮಾನತೆಯ ಭದ್ರ ಬುನಾದಿಗೆ ನಾಲ್ವಡಿಯವರೇ ಕಾರಣ. ಪ್ರಜಾಪ್ರಭುತ್ವದ ಆಲೋಚನೆಗಳನ್ನು ರಾಜಪ್ರಭುತ್ವದಲ್ಲೇ ತಂದ ಅವರು ಜಾತಿ-ಭೇದವಿಲ್ಲದ ಕಲ್ಯಾಣ ರಾಜ್ಯವನ್ನು (ರಾಮರಾಜ್ಯ) ನಿರ್ಮಿಸಿದ್ದಕ್ಕಾಗಿ ಇಂದಿಗೂ ಪ್ರತಿಯೊಬ್ಬ ಕನ್ನಡಿಗನ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.
"ಕೃಷ್ಣರಾಜ ಭೂಪ ಮನೆ ಮನೆಗೆ ದೀಪ" ಎಂಬ ನಾಣ್ಣುಡಿಯಂತೆ, ಮೈಸೂರನ್ನು ಬೆಳಗಿದ ಆ ರಾಜರ್ಷಿಯ ದೂರದೃಷ್ಟಿ ಇಂದಿಗೂ ನಮ್ಮ ನಾಡಿಗೆ ದಾರಿದೀಪವಾಗಿದೆ.....