ನವದೆಹಲಿ: ವಿಜಯದಶಮಿ ಹಬ್ಬದ ಅಂಗವಾಗಿ ದೆಹಲಿಯ ಪಿತಾಂಪುರದಲ್ಲಿ ನಡೆದ ರಾಮಲೀಲಾ ಮಹೋತ್ಸವದಲ್ಲಿ ರಾವಣನ ಪ್ರತಿಕೃತಿಯ ಜೊತೆಗೆ ಬೃಹತ್ ಜಿರಳೆಯ ಪ್ರತಿಕೃತಿಯನ್ನೂ ದಹಿಸಲಾಗಿದೆ. ಈ ವಿಭಿನ್ನ ಆಚರಣೆ ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದ್ದು, ಆಡಳಿತಾರೂಢ ಬಿಜೆಪಿ ನಾಯಕರು ಮತ್ತು ಆಮ್ ಆದ್ಮಿ ಪಕ್ಷದ ನಡುವೆ ವಾಗ್ವಾದಕ್ಕೆ ವೇದಿಕೆಯಾಗಿದೆ.
ಪಿತಾಂಪುರದ ನೇತಾಜಿ ಸುಭಾಷ್ ಪ್ಲೇಸ್ನಲ್ಲಿರುವ ರಾಮಲೀಲಾ ಮೈದಾನದಲ್ಲಿ ಶ್ರೀ ಕೇಶವ್ ರಾಮಲೀಲಾ ಸಮಿತಿಯ ವತಿಯಿಂದ ದಸರಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಸಾಂಪ್ರದಾಯಿಕ ರಾವಣ ದಹನದ ಜೊತೆಗೆ ಸುಮಾರು 30 ಅಡಿ ಎತ್ತರದ ಜಿರಳೆಯ ಪ್ರತಿಕೃತಿಗೂ ಅಗ್ನಿಸ್ಪರ್ಶ ಮಾಡಿದರು.
ಆಪ್ನಿಂದ ಆಕ್ಷೇಪ: ರಾಮಲೀಲಾ ಕಾರ್ಯಕ್ರಮದಲ್ಲಿ ರಾವಣನ ಜೊತೆಗೆ ಜಿರಳೆಯ ಪ್ರತಿಕೃತಿಯನ್ನು ದಹಿಸಿರುವುದನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ವಿರೋಧಿಸಿದೆ. ಪಕ್ಷದ ದೆಹಲಿ ಅಧ್ಯಕ್ಷ ಸೌರಭ್ ಭಾರದ್ವಾಜ್ ಅವರು ಈ ಸಂಬಂಧ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಮತ್ತು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಈ ಕೃತ್ಯವು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ರಾಮಲೀಲಾದಂತಹ ಧಾರ್ಮಿಕ ಹಾಗೂ ಸಾಂಪ್ರದಾಯಿಕ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆಪ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಾರ್ಯಕ್ರಮದ ಆಯೋಜಕರು, ಮುಖ್ಯ ಅತಿಥಿಯಾಗಿದ್ದ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೌರಭ್ ಭಾರದ್ವಾಜ್ ತಮ್ಮ ದೂರಿನಲ್ಲಿ ಒತ್ತಾಯಿಸಿದ್ದಾರೆ. ಈ ಬೆಳವಣಿಗೆಯಿಂದ ದೆಹಲಿಯ ದಸರಾ ಆಚರಣೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.