ಲಕ್ನೋ: ಉತ್ತರ ಪ್ರದೇಶದ (Uttara Pradesh) ಗಾಜಿಯಾಬಾದ್ನಲ್ಲಿ ಮತ್ತೊಬ್ಬ ನೀಟ್ ಆಕಾಂಕ್ಷಿಯೊಬ್ಬ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಶರಣಾಗುವ ಮುನ್ನ ವಿದ್ಯಾರ್ಥಿ 1 ನಿಮಿಷದ ವಿಡಿಯೋ ಮಾಡಿದ್ದು, ಈ ವಿಡಿಯೋದಲ್ಲಿ ʻವಿಭಿನ್ನವಾಗಿ ಏನನ್ನಾದರು ಮಾಡಲು ಯೋಚಿಸುತ್ತಿದ್ದೇನೆʼ ಎಂದು ಹೇಳಿದ್ದಾನೆ.
ನೀಟ್ ಮರು ಪರೀಕ್ಷೆಗೆ ಸಿದ್ದನಾಗುತ್ತಿದ್ದ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗಾಜಿಯಬಾದ್ನ, ವಿಜಯ ನಗರದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನ ಜತಿನ್ ಕುಮಾರ್ ಎಂದು ಗುರುತಿಸಲಾಗಿದ್ದು, ಇನ್ನು ಮೃತ ಜತಿನ್ ಗುರುವಾರ ಮಧ್ಯರಾತ್ರಿ ತನ್ನ ಕೋಣೆಯಲ್ಲಿ ಅಧ್ಯಯನ ಮಾಡುತ್ತಿದ್ದ, ಮರುದಿನ ಶುಕ್ರವಾರ ಎಷ್ಟು ಸಮಯವಾದರ ಆತ ಹೊರಗೆ ಬಾರದನ್ನ ಕಂಡ ಪೋಷಕರು ಆತನನ್ನ ಎಬ್ಬಿಸಲು ಹೋದಾಗ ಮೃತಪಟ್ಟಿರುವುದು ಕಂಡು ಬಂದಿದೆ.
ಇನ್ನು ಘಟನೆ ಸಂಬಂಧ ವಿಜಯನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದು, ವಿಧಿ ವಿಜ್ಞಾನ ತಜ್ಞರು ಮೃತ ವಿದ್ಯಾರ್ಥಿಯ ಕೊಠಡಿಯ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸೀಲಿಂಗ್ ಫ್ಯಾನ್ಗೆ ಕಟ್ಟಿದ್ದ ನೇಣಿನ ಕುಣಿಗೆ ತುಂಡಾಗಿದ್ದು, ಜತಿನ್ ಶವ ನೆಲದ ಮೇಲೆ ಬಿದ್ದಿರುವುದು ಕಂಡು ಬಂದಿದೆ. ಜೊತೆಗೆ ವಿದ್ಯಾರ್ಥಿಯ ಮೊಬೈಲ್ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಒಂದು ನಿಮಿಷ, ನಾಲ್ಕು ಸೆಕೆಂಡುಗಳ ವಿಡಿಯೋ ಪತ್ತೆಯಾಗಿದ್ದಿ. ವಿಡಿಯೋದಲ್ಲಿ ಆತ ತಮ್ಮ ಅಧ್ಯಯನ ಕೊಠಡಿಯನ್ನು ತೋರಿಸುತ್ತಾ, ಇಂದು ʻವಿಭಿನ್ನವಾಗಿ ಏನಾದರೂ ಮಾಡುವ ಬಗ್ಗೆ ಯೋಚಿಸುತ್ತಿದ್ದೇನೆʼ ಎಂದು ಹೇಳಿದ್ದ. ಅಲ್ಲದೇ ಸೀಲಿಂಗ್ ಫ್ಯಾನ್ನಲ್ಲಿ ನೇತಾಡುತ್ತಿರುವ ಕುಣಿಕೆಯ ಕಡೆಗೆ ಬೆರಳು ತೋರಿಸಿದ್ದಾನೆ. ಇದು ಆತ ಆತ್ಮಹತ್ಯೆಗೆ ಶರಣಾಗುವ ಕೆಲವೇ ಕ್ಷಣಗಳ ಮೊದಲು ರೆಕಾರ್ಡ್ ಆಗಿತ್ತು.
ವಿಡಿಯೋದಲ್ಲಿ ತಾನು ಯಾವುದೇ ಒತ್ತಡದಲ್ಲಿಲ್ಲ ಮತ್ತು ನೀಟ್ ಪರೀಕ್ಷೆಯ ಬಗ್ಗೆ ಒತ್ತಡಕ್ಕೊಳಗಾಗಿಲ್ಲ. ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಉದ್ವೇಗಕ್ಕೆ ಒಳಗಾಗದಂತೆ ತನ್ನ ತಂದೆ ಸಲಹೆ ನೀಡಿದ್ದರು ಎಂದು ಹೇಳಿದ್ದಾನೆ. ಪೊಲೀಸರು ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡುತ್ತಿದ್ದಾರೆ.