ಭೋಪಾಲ್: ಪೂರ್ವ ಮಧ್ಯಪ್ರದೇಶದ ಗುಡ್ಡಗಾಡು ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಿತ್ರಕೂಟದಲ್ಲಿ ಎರಡು ದಶಕಗಳಲ್ಲೇ ಅತ್ಯಂತ ಭೀಕರ ಪ್ರವಾಹ ಉಂಟಾಗಿದೆ. ಮಂದಾಕಿನಿ ನದಿ ಅಪಾಯದ ಮಟ್ಟಕ್ಕಿಂತ ಸುಮಾರು 13 ಮೀಟರ್ ಎತ್ತರಕ್ಕೆ ಏರಿದೆ. ಮಧ್ಯಪ್ರದೇಶ–ಉತ್ತರ ಪ್ರದೇಶ ಗಡಿಯ ಎರಡೂ ಬದಿಗಳಲ್ಲಿರುವ ಅನೇಕ ಪ್ರದೇಶಗಳು ಪ್ರವಾಹದಿಂದ ತತ್ತರಿಸಿದ್ದು, ಮನೆಗಳು, ಹೋಟೆಲ್ಗಳು, ದೇವಾಲಯಗಳು ಸೇರಿದಂತೆ ಹಲವು ಪ್ರದೇಶಗಳು ಜಲಾವೃತಗೊಂಡಿವೆ.
ಶನಿವಾರ ರಾತ್ರಿ ಹಾಗೂ ಭಾನುವಾರ ಬೆಳಗಿನ ಅವಧಿಯಲ್ಲಿ 14–15 ಗಂಟೆಗಳ ಕಾಲ ನಿರಂತರವಾಗಿ ಧಾರಾಕಾರ ಮಳೆ ಸುರಿದಿದೆ. ಇದರಿಂದ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆ ಸಂಪರ್ಕಕ್ಕೂ ತೀವ್ರ ಅಡಚಣೆ ಉಂಟಾಗಿದೆ. ಸತತ ಮಳೆಯಿಂದ ಗುಡ್ಡಗಾಡು ಪ್ರದೇಶಗಳಲ್ಲಿ ಮಣ್ಣು ಕುಸಿತವಾಗಿದ್ದು, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ನಡುವಿನ ಗಡಿಯಲ್ಲಿರುವ ರಸ್ತೆಗಳು ಕೂಡ ಹಾನಿಗೊಳಗಾಗಿವೆ. ಚಿತ್ತಕೂಟದ ಮೂಲಕ ಹರಿಯುವ ಮಂದಾಕಿನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಶನಿವಾರದ ವೇಳೆಗೆ ನದಿ ಅಪಾಯದ ಮಟ್ಟಕ್ಕಿಂತ ಸುಮಾರು 12–13 ಮೀಟರ್ ಎತ್ತರಕ್ಕೆ ಹರಿಯುತ್ತಿತ್ತು. ಪಟ್ಟಣದ ದೊಡ್ಡ ಪ್ರದೇಶಗಳು ಮುಳುಗಡೆಯಾಗಿದ್ದು, ನದಿ ಮುಂಭಾಗದಲ್ಲಿರುವ ಕಟ್ಟಡಗಳಿಗೆ ಪ್ರವಾಹದ ನೀರು ನುಗ್ಗಿದೆ. ನದಿಯ ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ನರ್ಮದಾ ನದಿಯ ತಟ ಪ್ರದೇಶಗಳಲ್ಲೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವಾಹದ ನೀರು ಸೇತುವೆಯ ಕೆಳಭಾಗವನ್ನು ಕೊಚ್ಚಿಕೊಂಡು ಹೋಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ.
ಪ್ರವಾಹದಿಂದಾಗಿ ಹಲವು ಜಿಲ್ಲೆಗಳಲ್ಲಿ ಹಟ್ಟಿ-ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ನಡುವಿನ ಗಡಿಯ ಸಂಪರ್ಕವೂ ಕಡಿತಗೊಂಡಿದೆ. ಸುಮಾರು 700 ಜನರನ್ನು ರಕ್ಷಿಸಲಾಗಿದ್ದು, ವಿವಿಧೆಡೆ ಸಿಲುಕಿದ್ದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಮಧ್ಯಪ್ರದೇಶದಲ್ಲಿ 2003ರ ಬಳಿಕ ಇಂತಹ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ