Search


ನೇಪಾಳ ಪ್ರವಾಹ; 1643 ವಿದ್ಯಾರ್ಥಿಳನ್ನ ರಕ್ಷಿಸಿದ್ದ ಶಿಕ್ಷಕ, ವ್ಯಾಪಾಕ ಪ್ರಶಂಸೆ

ಕಠ್ಮಂಡು: ನೇಪಾಳದಲ್ಲಿ ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದ ಪರಿಣಾಮ 700ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸುಮಾರು 2,500 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ನಡುವೆ ಪ್ರವಾಹದ ನಡುವೆ 1,643 ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಿದ ಶಾಲಾ ಪ್ರಾಂಶುಪಾಲ ರಾಜೇಂದ್ರ ದವಾಡಿ ಅವರ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಬುಧವಾರ (ಆ.26) ಬೆಳಗ್ಗೆ ಸುಮಾರು 9:20ರ ವೇಳೆಗೆ ನೇಪಾಳದ ತ್ರಿಭುವನ್ ಕಣಿವೆಯಲ್ಲಿರುವ ಶಾಲೆಗೆ ಪ್ರವಾಹದ ನೀರು ನುಗ್ಗುವ ಆತಂಕ ಎದುರಾಗಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪ್ರಾಂಶುಪಾಲ ರಾಜೇಂದ್ರ ದವಾಡಿ ಅವರು ತಕ್ಷಣ ಮಕ್ಕಳ ಸುರಕ್ಷತೆಗೆ ಕ್ರಮ ಕೈಗೊಂಡಿದ್ದಾರೆ. ಪ್ರವಾಹದ ನೀರು ವೇಗವಾಗಿ ಏರುತ್ತಿದ್ದರೂ ಧೃತಿಗೆಡದೆ, ಶಾಲೆಯಲ್ಲಿದ್ದ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯದಲ್ಲಿ ಅವರು ಮುಂಚೂಣಿಯಲ್ಲಿ ನಿಂತಿದ್ದರು. ಒಟ್ಟು 1,643 ಮಕ್ಕಳನ್ನು ಅಪಾಯದಿಂದ ಪಾರು ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಪ್ರವಾಹದ ತೀವ್ರತೆಯಿಂದಾಗಿ ಹಲವು ಪ್ರದೇಶಗಳಲ್ಲಿ ಮನೆಗಳು, ಶಾಲೆಗಳು ಸೇರಿದಂತೆ ವಿವಿಧ ಕಟ್ಟಡಗಳಿಗೆ ಹಾನಿಯಾಗಿದೆ. ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದ್ದು, ನಾಪತ್ತೆಯಾಗಿರುವವರಿಗಾಗಿ ರಕ್ಷಣಾ ತಂಡಗಳು ಶೋಧ ಕಾರ್ಯ ನಡೆಸುತ್ತಿವೆ.

700ಕ್ಕೂ ಹೆಚ್ಚು ಸಾವು, 2,500 ಮಂದಿ ನಾಪತ್ತೆ

ನೇಪಾಳದ ವಿವಿಧ ಭಾಗಗಳಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಭಾರೀ ನಷ್ಟ ಸಂಭವಿಸಿದೆ. ಸಾವಿನ ಸಂಖ್ಯೆ 700ರ ಗಡಿ ದಾಟಿದ್ದು, 2,500ಕ್ಕೂ ಹೆಚ್ಚು ಮಂದಿ ಇನ್ನೂ ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ. ಈ ನಡುವೆ ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಿದ ರಾಜೇಂದ್ರ ದವಾಡಿ ಅವರ ಕಾರ್ಯ ಮಾನವೀಯತೆ ಮತ್ತು ಧೈರ್ಯಕ್ಕೆ ಮಾದರಿಯಾಗಿದೆ.

By Ravikumar - 31-08-2026


Ads in Post