ಕಟ್ಮಂಡು : ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ವೇಳೆ ತ್ರಿಶೂಲಿ 3ಎ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಿಲುಕಿಕೊಂಡಿದ್ದ ಇಬ್ಬರು ವಿದ್ಯುತ್ ಪ್ರಾಧಿಕಾರದ ಸಿಬ್ಬಂದಿಯನ್ನು ಘಟನೆ ನಡೆದ ಬರೋಬ್ಬರಿ 9 ದಿನಗಳ ಬಳಿಕ ರಕ್ಷಿಸಲಾಗಿದೆ. ಸುರಂಗದಲ್ಲಿ ಸಿಲುಕಿದ್ದ 30 ವರ್ಷದ ಸಂಜಯ್ ಶಾ ಅವರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ರಕ್ಷಣೆಯಾದ ಬಳಿಕ ಮಾತನಾಡಿದ ಸಂಜಯ್ ಶಾ, ಸಂಕಷ್ಟದ ದಿನಗಳಲ್ಲಿ ತಮಗೆ ಧೈರ್ಯ ನೀಡಿದ್ದು ದೇವರ ಮೇಲಿನ ನಂಬಿಕೆ ಎಂದು ತಿಳಿಸಿದ್ದಾರೆ.
“ಘಟನೆ ನಡೆದ ನಂತರ ಯಾರಾದರೂ ಬಂದು ನನ್ನನ್ನು ರಕ್ಷಿಸುತ್ತಾರೆ ಎಂಬ ನಂಬಿಕೆ ಇತ್ತು. ಆ ನಂಬಿಕೆಯಿಂದಲೇ ನಾನು ಸತತವಾಗಿ 9 ದಿನಗಳ ಕಾಲ ‘ಹರೇ ಕೃಷ್ಣ’ ಎಂದು ಪಠಿಸುತ್ತಿದ್ದೆ,” ಎಂದು ಅವರು ಹೇಳಿದ್ದಾರೆ. ವಿಶೇಷವೆಂದರೆ, ಸಂಜಯ್ ಶಾ ಅವರು ಕೃಷ್ಣ ಜನ್ಮಾಷ್ಟಮಿ ದಿನವೇ ಸುರಂಗದಿಂದ ಸುರಕ್ಷಿತವಾಗಿ ಹೊರಬಂದಿರುವುದು ಕಾಕತಾಳೀಯವಾಗಿದೆ.
ಘಟನೆ ನಡೆದ ಸಂದರ್ಭವನ್ನು ವಿವರಿಸಿದ ಅವರು, “ನಾನು ಕಂಟ್ರೋಲ್ ರೂಮ್ನಲ್ಲಿ ಕೆಲಸ ಮಾಡುತ್ತಿದ್ದೆ. ಎಲ್ಲರ ಜೀವ ಉಳಿಸುವುದು ನನ್ನ ಹೊಣೆಯಾಗಿತ್ತು. ಆದ್ದರಿಂದ ನಾನು ಕೊನೆಯವರೆಗೂ ಅಲ್ಲಿಯೇ ಉಳಿಯಬೇಕಾಯಿತು. ಎಲ್ಲರೂ ಹೊರಹೋಗುವಂತೆ ಸೂಚಿಸುತ್ತಿದ್ದೆ. ಆದರೆ ನಾನು ಹೊರಬರುವ ವೇಳೆಗೆ ತಡವಾಗಿತ್ತು,” ಎಂದು ತಿಳಿಸಿದ್ದಾರೆ. ರಕ್ಷಣೆಯಾದ ಬಳಿಕ ಸಂಜಯ್ ಶಾ ಅವರನ್ನು ತ್ರಿಶೂಲಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಎಂದು ರಕ್ಷಣಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಇದೇ ವೇಳೆ, 45 ವರ್ಷದ ಕಬೀರ್ ಮಹರ್ಜನ್ ಅವರನ್ನೂ ಸುರಕ್ಷಿತವಾಗಿ ರಕ್ಷಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕಂಡುವಿನ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತ್ರಿಶೂಲಿ 3ಎ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಇನ್ನೂ ಹಲವರು ಸಿಲುಕಿಕೊಂಡಿರುವ ಸಾಧ್ಯತೆ ಇದ್ದು, ಅವರನ್ನು ರಕ್ಷಿಸುವ ಉದ್ದೇಶದಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.