Search


ಹೊಸ ಪ್ರಯತ್ನಕ್ಕೆ ಧೈರ್ಯ ಬೇಕು; ಯಶ್ ಪರಿಶ್ರಮವನ್ನ ಕೊಂಡಾಡಿದ ಕಿಚ್ಚ

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಸಿನಿಮಾ ಸದ್ಯ ಭಾರೀ ಚರ್ಚೆಯಲ್ಲಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ನಟ ಕಿಚ್ಚ ಸುದೀಪ್‌ ಅವರು ಯಶ್‌ ಅವರ ವಿಭಿನ್ನ ಪ್ರಯತ್ನವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.  ಸುದೀಪ್‌ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಯಶ್‌ ಅವರನ್ನು ಟ್ಯಾಗ್‌ ಮಾಡಿ, ಹಿಂದಿನ ಬ್ಲಾಕ್‌ಬಸ್ಟರ್‌ನ ಯಶಸ್ಸಿನ ಸೂತ್ರವನ್ನೇ ಮತ್ತೆ ಬಳಸುವ ಬದಲು ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿರುವುದು ಮೆಚ್ಚುವಂತಹದ್ದು ಎಂದು ಹೇಳಿದ್ದಾರೆ. 

ಹೊಸ ಪ್ರಯತ್ನಕ್ಕೆ ಧೈರ್ಯ ಬೇಕು

ಯಶ್‌ ಅವರು ಸಾಂಪ್ರದಾಯಿಕ ಕಮರ್ಷಿಯಲ್‌ ಸಿನಿಮಾದ ಹಾದಿಯನ್ನು ಬಿಟ್ಟು ವಿಭಿನ್ನ ರೀತಿಯ ಕಥೆ ಹಾಗೂ ನಿರೂಪಣೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇಂತಹ ಪ್ರಯತ್ನ ಮಾಡಲು ವಿಭಿನ್ನ ಮನಸ್ಥಿತಿ, ದೃಢ ನಂಬಿಕೆ ಮತ್ತು ಧೈರ್ಯ ಅಗತ್ಯ ಎಂದು ಸುದೀಪ್‌ ಅಭಿಪ್ರಾಯಪಟ್ಟಿದ್ದಾರೆ. 

‘ಟಾಕ್ಸಿಕ್‌’ ಸಿನಿಮಾದಲ್ಲಿ ಕುತೂಹಲ ಮೂಡಿಸುವ ಅಂಶಗಳಿದ್ದು, ಸಿನಿಮಾ ಕುರಿತು ಆರೋಗ್ಯಕರ ಚರ್ಚೆ ಮತ್ತು ಕಲಿಕೆಗೆ ಅವಕಾಶ ಇದೆ ಎಂದು ಸುದೀಪ್‌ ಹೇಳಿದ್ದಾರೆ. ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬಂದು ಪ್ರಯೋಗ ಮಾಡಲು ಮುಂದಾದ ಯಶ್‌ ಅವರಿಗೆ ಅಭಿನಂದನೆಯನ್ನೂ ತಿಳಿಸಿದ್ದಾರೆ. 

‘ಟಾಕ್ಸಿಕ್‌’ ಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಚಿತ್ರಮಂದಿರಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಸುದೀಪ್‌ ಅವರ ಈ ಹೇಳಿಕೆ ಬಂದಿದೆ. ಹೀಗಾಗಿ, ಚಿತ್ರದ ಫಲಿತಾಂಶಕ್ಕಿಂತ ವಿಭಿನ್ನ ಪ್ರಯತ್ನಕ್ಕೆ ಬೆಂಬಲ ನೀಡಿರುವ ಸುದೀಪ್‌ ಅವರ ನಿಲುವು ಇದೀಗ ಗಮನ ಸೆಳೆದಿದೆ

By Ravikumar - 29-08-2026


Ads in Post