Search


ಮಹಿಳಾ ಮಂತ್ರಿಗಳಿಲ್ಲದ ರಾಜ್ಯಕ್ಕೆ ನೂತನ ಮಹಿಳಾ ರಾಜ್ಯಪಾಲರ ನೇಮಕ; ರಾಷ್ಟ್ರಪತಿಗಳ ಆದೇಶ

ಬೆಂಗಳೂರು: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕರ್ನಾಟಕ ಸೇರಿ ಐದು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿದ್ದು, ಮೂರು ರಾಜ್ಯಗಳ ರಾಜ್ಯಪಾಲರ ಹುದ್ದೆಗಳಲ್ಲಿ ಬದಲಾವಣೆ ಘೋಷಿಸಿದ್ದಾರೆ. ಈ ನೇಮಕಾತಿಗಳ ಮೂಲಕ ಕರ್ನಾಟಕ ಮತ್ತು ಒಡಿಶಾ ಸೇರಿದಂತೆ ಹಲವು ರಾಜ್ಯಗಳಿಗೆ ಹೊಸ ರಾಜ್ಯಪಾಲರು ನೇಮಕಗೊಂಡಿದ್ದಾರೆ. ಮಹಿಳೆಯರಿಗೆ ಮಂತ್ರಿ ಮಂಡಲದಲ್ಲಿ ಸ್ಥಾನ ಸಿಗದ ಹಿನ್ನಲೆಯಲ್ಲಿ ರಾಜ್ಯಕ್ಕೆ ಮಹಿಳಾ ರಾಜ್ಯಪಾಲರು ನೇಮಕಾವಾಗಿರುವುದು ವಿಶೇಷವೆನಿಸಿದೆ.

ಪ್ರಸ್ತುತ ಸಿಕ್ಕಿಂ ರಾಜ್ಯಪಾಲರಾಗಿರುವ ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಕೇರಳದ ಹಾಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ತಮಿಳುನಾಡಿನ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಬ್ರಜ್ ಮೋಹನ್ ರಾಮ್ ಅವರನ್ನು ಒಡಿಶಾದ ರಾಜ್ಯಪಾಲರನ್ನಾಗಿ ಹಾಗೂ ಡಾ. ಧಾಲ್ ಸಿಂಗ್ ಬಿಸೆನ್ ಅವರನ್ನು ಉತ್ತರಾಖಂಡದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ದುಷ್ಯಂತ್ ಗೌತಮ್ ಅವರು ಸಿಕ್ಕಿಂನ ನೂತನ ರಾಜ್ಯಪಾಲರಾಗಲಿದ್ದಾರೆ.

ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಅವರನ್ನು ನೇಮಕ ಮಾಡಲಾಗಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಮುಖ ನಾಯಕಿಯಾಗಿರುವ ಅವರು 1999ರಿಂದ 2004ರವರೆಗೆ ಹರಿಯಾಣದ ಮಹೇಂದ್ರಗಢ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿದ್ದರು. ಬಿಜೆಪಿ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಯ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಇದಲ್ಲದೆ, ಡಾ. ಸುಧಾ ಯಾದವ್ ಅವರು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ (NCBC) ಮಾಜಿ ಸದಸ್ಯೆಯಾಗಿದ್ದಾರೆ. ರಾಷ್ಟ್ರಪತಿ ಭವನದ ಪ್ರಕಟಣೆಯ ಪ್ರಕಾರ, ನೇಮಕಗೊಂಡ ರಾಜ್ಯಪಾಲರು ತಮ್ಮ ತಮ್ಮ ರಾಜ್ಯಗಳಲ್ಲಿ ಅಧಿಕಾರ ವಹಿಸಿಕೊಳ್ಳುವ ದಿನಾಂಕದಿಂದ ಈ ನೇಮಕಾತಿಗಳು ಜಾರಿಗೆ ಬರಲಿವೆ.

By Ravikumar - 13-10-2026


Ads in Post