ಬೆಂಗಳೂರು : ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ (DK Shivakumar) ನೇತೃತ್ವದ ನೂತನ ಸರ್ಕಾರ ರಚನೆಯಾದ ಬೆನ್ನಲ್ಲೇ ಸಚಿವ ಸಂಪುಟ ರಚನೆಯ ಸರ್ಕಸ್ ಆರಂಭಗೊಂಡಿದೆ. ನಿನ್ನೆ ಡಿಕೆ ಶಿವಕುಮಾರ್ ಜೊತೆ 12 ಮಂದಿ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದು. ಇವರಿಗೆ ಖಾತೆ ಹಂಚಿಕೆ ವಿಷಯ ಕಾಂಗ್ರೆಸ್ಸಿಗೆ ಕಗ್ಗಂಟಾಗಿದೆ.
ಡಿಕೆಶಿ ಜೊತೆಗೆ 12 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಎಲ್ಲರೂ ಕೂಡ ತಮ್ಮ ಇಷ್ಟದ ಖಾತೆಗೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತಾದ ಚರ್ಚೆಯ ವೇಳೆ ಮಾಜಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಸಿಎಂ ಡಿಕೆ ಶಿವಕುಮಾರ್ ಅವರ ಮೇಲೆ ಆಕ್ರೋಶಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ರಾಮಲಿಂಗ ರೆಡ್ಡಿಯವರು ಸಿಎಂ ಮುಂದೆ ಬೆಂಗಳೂರು ಅಭಿವೃದ್ದಿ ಇಲಾಖೆಗಾಗಿ ಬೇಡಿಕೆ ಇಟ್ಟಿದ್ದು, ಸಿಎಂ ಇದನ್ನ ನಿರಾಕರಿಸಿ ಜಲ ಸಂಪನ್ಮೂಲ ಇಲಾಖೆ ನೀಡುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಇದರಿಂದ ಬೇಸರಗೊಂಡ ಸಚಿವರು ಸಭೆಯಿಂದ ಹೊರ ಬಂದಿದ್ದಾರೆ ಎಂದು ಮಾಹಿತಿ ಬಂದಿದೆ.
ನೂತನ ಸಚಿವರಿಗೆ ಯಾವ ಖಾತೆ?
ಪ್ರಮಾಣವಚನ ಸ್ವೀಕರಿಸಿರುವ ನೂತನ ಸಚಿವರಿಗೆ ಇನ್ನೂ ಯಾವುದೇ ಖಾತೆ ಹಂಚಿಕೆ ಆಗಿಲ್ಲ. ಹೀಗಾಗಿ ಸಂಭವನೀಯ ಖಾತೆಗಳ ಬಗ್ಗೆಯೂ ಸಾಕಷ್ಟು ಚರ್ಚೆಗಳು ಶುರುವಾಗಿವೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರು ಸಚಿವ ಎಂ.ಬಿ.ಪಾಟೀಲ್, ಸಚಿವರಿಗೆ ಖಾತೆ ಹಂಚಿಕೆ ಮುಖ್ಯಮಂತ್ರಿಗಳ ಪರಮಾಧಿಕಾರ. ಹೈಕಮಾಂಡ್ ಹೇಳಿದ್ದನ್ನು ಸಂತೋಷದಿಂದ ಸ್ವೀಕಾರ ಮಾಡಿದ್ದೇವೆ ಎಂದಿದ್ದಾರೆ. ಯಾವುದೇ ಖಾತೆಯನ್ನು ಕೊಟ್ಟರೂ ನಾನು ನಿಭಾಯಿಸುತ್ತೇನೆ. ಖಾತೆ ಯಾವುದು ಅನ್ನೋದು ಮುಖ್ಯವಲ್ಲ, ಕೆಲಸ ಮುಖ್ಯ ಆಗುತ್ತೆ ಎಂದು ಮತ್ತೋರ್ವ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಆದರೆ ಕೆಲವು ಮೂಲಗಳ ಪ್ರಕಾರ ಪರಮೇಶ್ವರ್ ಅವರಿಗೆ ಡಿಸಿಎಂ ಜೊತೆಗೆ, ಕಂದಾಯ ಇಲಾಖೆ, ಪ್ರಿಯಾಂಕ್ ಖರ್ಗೆ ಅವರಿಗೆ ಗೃಹ ಇಲಾಕೆ, ಎಂ.ಬಿ ಪಾಟೀಲ್ ಅವರಿಗೆ ಬೃಹತ್ ಕೈಗಾರಿಕೆ, ಸತೀಶ್ ಜಾರಕಿಹೊಳಿಗೆ ಲೋಕೋಪಯೋಗಿ ಇಲಾಖೆ , ಕೆ.ಎಚ್ ಮನಿಯಪ್ಪನವರಿಗೆ ಆಹಾರ ಇಲಾಖೆ, ಯು.ಟಿ ಖಾದರ್ಗೆ ಆರೋಗ್ಯ ಇಲಾಖೆ, ಕೆ.ಜೆ ಜಾರ್ಜ್ಗೆ ಇಂಧನ ಇಲಾಖೆ, ಈಶ್ವರ್ ಖಂಡ್ರೆಗೆ ಗ್ರಾಮೀಣಾಭಿವೃದ್ದಿ, ಯತೀಂದ್ರ ಸಿದ್ದರಾಮಯ್ಯಗೆ ನಗರಾಭಿವೃದ್ದಿ, ಬೈರತಿ ಸುರೇಶ್ಗೆ ಸಾರಿಗೆ ಇಲಾಖೆ, ಶರಣ ಪ್ರಕಾಶ್ ಪಾಟೀಲ್ಗೆ ವೈದ್ಯಕೀಯ ಇಲಾಖೆ ನೀಡಲಾಗುತ್ತದೆ ಎಂಬ ಮಾಹಿತಿ ಹೊರ ಬಿದ್ದಿದೆ.