Search


ಡಿಕೆಶಿ–ಅಶೋಕ್‌ ಖೇಣಿ ಮಾತುಕತೆ ಎನ್ನಲಾದ ಆಡಿಯೋ ರಿಲೀಸ್‌, ‘ಇದು ಪಾರ್ಟ್‌-1’ ಎಂದ ಎಚ್‌ಡಿಕೆ

ಬೆಂಗಳೂರು: ನೈಸ್ ಯೋಜನೆಗೆ ಸಂಬಂಧಿಸಿದ ವಿವಾದದ ನಡುವೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದು, ಹಲವು ದಾಖಲೆಗಳನ್ನು ಬಿಡುಗಡೆ ಮಾಡುವುದರ ಜೊತೆಗೆ ಡಿಕೆ ಶಿವಕುಮಾರ್ ಹಾಗೂ ಅಶೋಕ್ ಖೇಣಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನೈಸ್ ಯೋಜನೆ ದೇವೇಗೌಡರ ಕೂಸು ಎಂದು ಡಿಕೆ ಶಿವಕುಮಾರ್ ಹೇಳುತ್ತಾರೆ. ಆದರೆ ಇದು 2ಜಿ ಮತ್ತು ಕಲ್ಲಿದ್ದಲು ಹಗರಣಗಳಿಗಿಂತಲೂ ದೊಡ್ಡ ಹಗರಣ ಎಂದು ಆರೋಪಿಸಿದರು. ತಮ್ಮ ಆರೋಪಗಳಿಗೆ ಸಂಬಂಧಿಸಿದಂತೆ ಹಲವು ದಾಖಲೆಗಳನ್ನು ಬಿಡುಗಡೆ ಮಾಡಿದ ಅವರು, 2003ರಲ್ಲಿ ಡಿಕೆ ಶಿವಕುಮಾರ್ ಅವರ ಆಸ್ತಿ ಸುಮಾರು ₹4 ಕೋಟಿ ಇದ್ದರೆ, 2023ರ ವೇಳೆಗೆ ₹1,413 ಕೋಟಿಗೆ ಏರಿಕೆಯಾಗಿದೆ ಎಂದು ಹೇಳಿದರು. ಭೂಮಿಯ ಬಳಕೆ ಉದ್ದೇಶ (ODP) ಬದಲಾವಣೆಯಿಂದ ಆಸ್ತಿ ಹೆಚ್ಚಾಗಿದೆ ಎಂದು ಅವರು ಆರೋಪಿಸಿದರು.

ಡಿಕೆ ಶಿವಕುಮಾರ್ ಕುಟುಂಬದ ವಿರುದ್ಧವೂ ಭೂಕಬಳಿಕೆ ಆರೋಪ ಮಾಡಿದ ಕುಮಾರಸ್ವಾಮಿ, 2004ರ ನವೆಂಬರ್ 3ರಂದು ಡಿ.ಕೆ. ಸುರೇಶ್ ಅವರು ಸರ್ಕಾರದ ಯೋಜನೆಗೆ 1997ರಲ್ಲೇ ಅಧಿಸೂಚಿತವಾಗಿದ್ದ ಸುಮಾರು 10 ಎಕರೆ ಭೂಮಿಯನ್ನು ಖರೀದಿಸಿದ್ದಾರೆ ಎಂದು ದೂರಿದರು. ಬಳಿಕ 2026ರಲ್ಲಿ ಅದೇ ಭೂಮಿಯನ್ನು ಡಿಕೆ ಶಿವಕುಮಾರ್ ಅವರ ಪುತ್ರಿ ಖರೀದಿಸಿದ್ದಾರೆ ಎಂದು ಆರೋಪಿಸಿದ ಅವರು, ಕುಟುಂಬದ ಸದಸ್ಯರ ಹೆಸರಿನಲ್ಲಿ ಭೂಮಿಯನ್ನು ವರ್ಗಾಯಿಸಲಾಗಿದೆ ಎಂದು ಹೇಳಿದರು. ಅಧಿಕಾರಿಗಳಿಗೆ ಒತ್ತಡ ಹೇರಿ 150ರಿಂದ 200 ಎಕರೆಗೂ ಹೆಚ್ಚು ಗೋಮಾಳ ಹಾಗೂ ಇತರ ಭೂಮಿಯನ್ನು ಕುಟುಂಬದ ಹೆಸರಿಗೆ ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನೂ ಮಾಡಿದರು.

ಇದೇ ವೇಳೆ ಡಿಕೆ ಶಿವಕುಮಾರ್ ಹಾಗೂ ಅಶೋಕ್ ಖೇಣಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿದರು. ಆಡಿಯೋದಲ್ಲಿ, ಅಶೋಕ್ ಖೇಣಿ ಅವರು ತಮ್ಮ ಹಣಕಾಸಿನ ಬೇಡಿಕೆ ಹಾಗೂ ಸರ್ಕಾರದ ಆರ್ಥಿಕ ಸ್ಥಿತಿಗೆ ಸಂಬಂಧಿಸಿದಂತೆ ಮಾತನಾಡಿದ್ದಾರೆ ಎನ್ನಲಾದ ಮಾತುಗಳಿವೆ ಎಂದು ಕುಮಾರಸ್ವಾಮಿ ಹೇಳಿದರು. ಈ ಆಡಿಯೋ ಪ್ರಕರಣದ ‘ಪಾರ್ಟ್‌-1’ ಮಾತ್ರವಾಗಿದ್ದು, ಶೀಘ್ರದಲ್ಲೇ ಪಾರ್ಟ್‌-2 ಮತ್ತು ಪಾರ್ಟ್‌-3 ಬಿಡುಗಡೆ ಮಾಡುವುದಾಗಿ ಅವರು ಘೋಷಿಸಿದರು.

‘ಕೆಜಿಎಫ್ ಪಾರ್ಟ್‌-3’ ಮಾದರಿಯಲ್ಲಿ ಮುಂದಿನ ದಾಖಲೆಗಳು ಮತ್ತು ಆಡಿಯೋಗಳು ಹೊರಬರಲಿವೆ ಎಂದು ಹೇಳಿದ ಕುಮಾರಸ್ವಾಮಿ, ತಾವು ಬಿಡುಗಡೆ ಮಾಡಿರುವುದು ಸಣ್ಣ ವಿಚಾರ ಮಾತ್ರ. ಮುಂದೆ ಇನ್ನಷ್ಟು ವಿಚಾರಗಳು ಬಹಿರಂಗವಾಗಲಿವೆ ಎಂದು ತಿಳಿಸಿದರು.

By Ravikumar - 29-09-2026


Ads in Post