ಬೆಂಗಳೂರು : ಕರ್ನಾಟಕ ರಾಜಕೀಯದ ಛಲದಂಕ ಮಲ್ಲ ಎಂದು ಯಾರನ್ನಾದರು ಕರೆಯಬಹುದಾದರೆ ಅದು ಡಿಕೆ ಶಿವಕುಮಾರ್, ತಾವು ಅಂದು ಕೊಂಡಿದ್ದು ಆಗುವವರೆಗೂ ಡಿಕೆ ತಮ್ಮ ಪ್ರಯತ್ನ ನಿಲ್ಲಿಸುವುದಿಲ್ಲ ಎಂಬುದಕ್ಕೆ. ಅವರು ಸಿಎಂ ಆಗುತ್ತಿರುವುದೇ ಸಾಕ್ಷಿ. ಆದರೆ ಡಿ.ಕೆ ಶಿವಕುಮಾರ್ ಸಿಎಂ ಕುರ್ಚಿ ಮೇಲೆ ಕೂರಲು ಕ್ಷಣಗಣನೆ ಆರಂಭವಾಗಿದ್ದರು ಕೂಡ ಅವರು ಇಲ್ಲಿಯವರೆಗೂ ಮಾಧ್ಯಮದ ಮುಂದೆ ಯಾವುದೇ ಹೇಳಿಕೆ ನೀಡಿಲ್ಲ, ಮೌನವಾಗಿದ್ದುಕೊಂಡೆ ತಾವು ಸಾಧಿಸಬಹುದಾದನ್ನ ಸಾಧಿಸಿದ್ದಾರೆ, ಆದರೆ ಈ ಮೌನದ ಹಿಂದೆ ನೊಣವಿನ ಕೆರೆ ಕರಿಬಸವೇಶ್ವರ ಸ್ವಾಮೀಜಿ ಅವರು ನೀಡಿದ ಎಚ್ಚರಿಕೆ ಇದೆ ಎಂಬ ಅಂಶ ಈಗ ಬಯಲಾಗಿದೆ.
ಡಿ.ಕೆ ಶಿವಕುಮಾರ್ ಅವರ ಪರಮ ದೈವ, ತುಮಕೂರಿನ, ತಿಪಟೂರು ತಾಲೂಕಿನ, ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿಬಸವೇಶ್ವರ ಸ್ವಾಮೀಜಿ (ಅಜ್ಜಯ್ಯ) ಇಂತಹದೊಂದು ಅತ್ಯಂತ ಗಂಭೀರ ಹಾಗೂ ನಿಗೂಢ ಎಚ್ಚರಿಕೆಯನ್ನು ನೀಡಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡಿರುವುದರಿಂದ ಡಿ.ಕೆ. ಶಿವಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ ಎಂಬ ಚರ್ಚೆಗಳು ಜೋರಾಗಿವೆ. ಆದರೆ, ಅಜ್ಜಯ್ಯನವರು “ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಮಾಧ್ಯಮಗಳ ಮುಂದೆ ಯಾವುದೇ ರೀತಿಯ ಹೇಳಿಕೆಗಳನ್ನು ಕೊಡಬೇಡಿ. ಈಗ ಆಡುವ ಒಂದು ಸಣ್ಣ ಮಾತು ಕೂಡ ಕೆಲಸವನ್ನು ಕೆಡಿಸಬಹುದು (ಮುತ್ತು ಒಡೆದು ಹೋಗಲಿದೆ)” ಎಂದು ಕಟ್ಟುನಿಟ್ಟಾಗಿ ತಾಕೀತು ಮಾಡಿದ್ದಾರೆ.
ಜೊತೆಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಡಿ.ಕೆ. ಶಿವಕುಮಾರ್ ಅವರಿಗೆ ಸದ್ಯದಲ್ಲೇ ‘ಸಾಡೇ ಸಾತಿ’ ಶನಿ ದೆಸೆ ಆರಂಭವಾಗಲಿದೆಯಂತೆ. ಗ್ರಹಗತಿಗಳ ಈ ಏರುಪೇರಿನ ಕಾಲದಲ್ಲಿ ಅತ್ಯಂತ ಜಾಗರೂಕರಾಗಿ ಇರಬೇಕು. ಇಲ್ಲದಿದ್ದರೆ ಸಿಎಂ ಕುರ್ಚಿ ಅತ್ಯಂತ ಹತ್ತಿರ ಬಂದರೂ ಕೊನೆಯ ಕ್ಷಣದಲ್ಲಿ ಕೈ ತಪ್ಪುವ (ಕೈಗೆ ಬಂದ ತುತ್ತು ಬಾಯಿಗೆ ಬರದೇ ಹೋಗುವ) ಗಂಡಾಂತರ ಎದುರಾಗಲಿದೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ ಎನ್ನಲಾಗಿದೆ.
ಇದೇ ಕಾರಣದಿಂದ ಡಿ.ಕೆ ಶಿವಕುಮಾರ್ ಕಳೆದ ಕೆಲ ದಿನಗಳಿಂದ ಸುಮ್ಮನಾಗಿದ್ದಾರೆ. ಒಂದು ಕಡೆ ಸಿಎಂ ಸಿದ್ದರಾಮಯ್ಯನವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು ಕೂಡ , ಡಿಕೆ ಮಾಧ್ಯಮಗಳ ಮುಂದೆ ಒಂದೇ ಒಂದು ಮಾತನ್ನು ಆಡುತ್ತಿಲ್ಲ, ಮಾತು ಬೆಳ್ಳಿ, ಮೌನ ಬಂಗಾರ ಎಂಬ ಗಾಧೆಯಂತೆ ಡಿಕೆ ಶಿವಕುಮಾರ್ ಮೌನವಾಗಿದ್ದುಕೊಂಡೆ ತಮ್ಮ ಕೆಲಸಗಳನ್ನ ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದಾರೆ.