Search


ಈಗ ಚುನಾವಣೆ ನಡೆದರು ಮೋದಿಗೆ ಮತ್ತೊಮ್ಮೆ ಅಧಿಕಾರ; ಇಂಡಿಯಾ ಟುಡೇ ಸರ್ವೇಯಲ್ಲಿ ಬಹಿರಂಗ

ನವದೆಹಲಿ: ಇಂದು ಲೋಕಸಭೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಇತ್ತೀಚಿನ Mood of the Nation ಸಮೀಕ್ಷೆ ಅಂದಾಜಿಸಿದೆ. ಸಮೀಕ್ಷೆಯ ಪ್ರಕಾರ ಎನ್‌ಡಿಎ ಒಟ್ಟು 326 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದ್ದು, ಬಿಜೆಪಿ ಏಕಾಂಗಿಯಾಗಿ 261 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.

ಇದೇ ವೇಳೆ ಕಾಂಗ್ರೆಸ್ ಪಕ್ಷಕ್ಕೆ 106 ಸ್ಥಾನಗಳು ಲಭಿಸಬಹುದು ಎಂದು ಸಮೀಕ್ಷೆ ಹೇಳಿದೆ. ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟಕ್ಕೆ ಒಟ್ಟು 185 ಸ್ಥಾನಗಳ ನಿರೀಕ್ಷೆ ವ್ಯಕ್ತವಾಗಿದೆ. ಕಳೆದ ಸಮೀಕ್ಷೆಗೆ ಹೋಲಿಸಿದರೆ ಎನ್‌ಡಿಎಯ ಸ್ಥಾನಗಳಲ್ಲಿ ಇಳಿಕೆ ಕಂಡುಬಂದಿದ್ದರೂ, ಬಹುಮತದ ಗಡಿ ದಾಟುವಷ್ಟು ಸಂಖ್ಯಾಬಲವನ್ನು ಮೈತ್ರಿಕೂಟ ಉಳಿಸಿಕೊಳ್ಳಲಿದೆ ಎಂದು ಸಮೀಕ್ಷೆ ಸೂಚಿಸಿದೆ.

ಮತ ಹಂಚಿಕೆಯಲ್ಲೂ ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿದೆ. ಎನ್‌ಡಿಎಗೆ ಸುಮಾರು 45.1% ಮತಗಳು, INDIA ಮೈತ್ರಿಕೂಟಕ್ಕೆ 39.1% ಮತಗಳು ಸಿಗುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಅಂದಾಜಿಸಿದೆ. ಜುಲೈ 1ರಿಂದ ಆಗಸ್ಟ್ 25ರವರೆಗೆ ನಡೆಸಿದ 25,184 ನೇರ ಸಂದರ್ಶನಗಳು ಸೇರಿದಂತೆ ಕಳೆದ ಆರು ತಿಂಗಳ ಅವಧಿಯ ಒಟ್ಟು 91,795 ಸಂದರ್ಶನಗಳ ಮಾಹಿತಿಯನ್ನು ಸಮೀಕ್ಷೆಯಲ್ಲಿ ಪರಿಗಣಿಸಲಾಗಿದೆ. ಆದರೆ ಇದು ಚುನಾವಣಾ ಫಲಿತಾಂಶವಲ್ಲ, ಪ್ರಸ್ತುತ ಜನಾಭಿಪ್ರಾಯದ ಆಧಾರದ ಮೇಲಿನ ಸಮೀಕ್ಷಾ ಅಂದಾಜು ಮಾತ್ರ. ನಿಜವಾದ ಲೋಕಸಭಾ ಚುನಾವಣೆಯ ಫಲಿತಾಂಶ ಮತದಾನದ ಸಂದರ್ಭದಲ್ಲಿ ಜನರ ನಿರ್ಧಾರದ ಮೇಲೆ ಅವಲಂಬಿತವಾಗಿರಲಿದೆ.

By Ravikumar - 28-08-2026


Ads in Post