ನಾಗರ ಹಾವು ಸಿನಿಮಾ ಆಗಷ್ಟೇ ತೆರೆ ಕಂಡಿತ್ತು. ಎಲ್ಲೆಡೆ ಭರ್ಜರಿ ಯಶಸ್ಸು. ಇದು 1972 ರಲ್ಲಿ ಬಿಡುಗಡೆಯಾದ ಕಡೆಯ ಸಿನಿಮಾ. ಚಿತ್ರ ನೂರು ದಿನ ಓಡಿ ಶತದಿನೋತ್ಸವ ಸಮಾರಂಭಕ್ಕೆ ತಯಾರಿಯೂ ನಡೆದಿತ್ತು. ಸಮಾರಂಭದ ಆಮಂತ್ರಣ ಪತ್ರಿಕೆ ಹಿಡಿದು ಯುವಕನೋರ್ವ ನಗರದ ಚಾಮುಂಡೇಶ್ವರಿ ಸ್ಟುಡಿಯೋ ಆವರಣದಲ್ಲಿ ಸುತ್ತಾಡುತಿದ್ದ. ಆಗ ಆ ಸ್ಟುಡಿಯೋದಲ್ಲಿ ದೂರದ ಬೆಟ್ಟ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಬೆಲ್ ಬಾಟಮ್ ಧರಿಸಿದ್ದ ಆ ಯುವಕ ಚಿತ್ರದ ನಾಯಕಿ ಭಾರತಿಯವರ ಮುಂದೆ ಕಾಣಿಸಿಕೊಳ್ಳುತ್ತಾ ಕಡೆಗೂ ಅವರ ಮುಂದೆ ನಿಂತು ತಾನು ಬಂದ ಉದ್ದೇಶ ಹೇಳಿಕೊಂಡ. ಆಗ ಜನಪ್ರಿಯ ತಾರೆ ಭಾರತಿಯವರಿಗೆ ತತ್ ಕ್ಷಣಕ್ಕೆ ಆ ಮುಖಭಾವ ಪರಿಚಿತ ಎನಿಸಿದರೂ ಅದು ಯಾರೆಂದು ನೆನಪಾಗಲಿಲ್ಲ.
"ನನ್ನ ಚಿತ್ರ (ನಾಗರಹಾವು )ಶತ ದಿನಗಳ ಸಂಭ್ರಮ ಕಂಡಿದೆ. ಆ ಪ್ರಯುಕ್ತ ಸಮಾರಂಭಕ್ಕೆ ಅತಿಥಿಯಾಗಿ ಬರಬೇಕೆಂದು "ಆಹ್ವಾನಿಸಿದಾಗ ಅಲ್ಲಿ ಧನ್ಯತಾ ಭಾವವಿತ್ತು. ಅಷ್ಟೇ ಅಲ್ಲ ಅಲ್ಲೊಂದು ಆರಾಧನಾ ಭಾವವೂ ಇತ್ತು.ಅಲ್ಲಿ ಪರಸ್ಪರ ಕಂಡ, ಮಾತನಾಡಿದ ಕಣ್ಣು, ಮನಸುಗಳೇ ಮುಂದೆ ಬಾಳ ಪಯಣಿಗರಾಗಿ ಜೊತೆಯಾಗಿ ನಡೆಯುವ ನಿರ್ಧಾರಕ್ಕೆ ನಾಂದಿ ಹಾಡಿದ್ದು. ಇದು ವಿಷ್ಣುವರ್ಧನ್ ಭಾರತಿ ದಂಪತಿಗಳ ಪ್ರೀತಿಯ ಕತೆ.
ಮುಂದೆ ಕೆಲವೇ ಸಮಯದಲ್ಲಿ ಇದೇ ಯುವ ನಟ ತಾನು ಅತಿಥಿಯಾಗಿ ಆಹ್ವಾನಿಸಿದ ತಾರೆಯ ಜೊತೆಗೆ ನಟಿಸುವ ಅವಕಾಶವೂ ಒದಗಿಬಂತು. ಅದೇ 1973 ರಲ್ಲಿ ತಯಾರಾದ ಸಿನಿಮಾ "ಮನೆ ಬೆಳಗಿದ ಸೊಸೆ ". ಸಂಗೀತದಲ್ಲಿ ಇಬ್ಬರಿಗೂ ಇದ್ದ ಸಮಾನ ಅಭಿರುಚಿ ಈ ಕಲಾವಿದರನ್ನು" ಮನೆ ಬೆಳಗಿದ ಸೊಸೆ "ಚಿತ್ರದ ಸೆಟ್ ಮತ್ತಷ್ಟು ಹತ್ತಿರವಾಗಿಸುತ್ತದೆ. ಆದಷ್ಟೇ ಅಲ್ಲ ಈ ಚಿತ್ರದ ದೊಡ್ಡ ಯಶಸ್ಸು ಮತ್ತಷ್ಟು ಚಿತ್ರಗಳಲ್ಲಿ ನಟಿಸುವ ವೇದಿಕೆ ಕಲ್ಪಿಸುತ್ತದೆ. ದೇವರ ಗುಡಿ, ನಾಗರ ಹೊಳೆ, ಭಾಗ್ಯ ಜ್ಯೋತಿ, ಬಂಗಾರದ ಜಿಂಕೆ, ಒಂದೇ ರೂಪ ಎರಡು ಗುಣ ಚಿತ್ರಗಳಲ್ಲಿ ವಿಷ್ಣುವರ್ಧನ್ ಭಾರತಿ ಜೊತೆಯಾಗಿ ನಟಿಸಿದ್ದಾರೆ.ಈ ಒಡನಾಟ, ಓಡಾಟಗಳಲ್ಲಿಯೇ ಮನಸ್ಸು ಬಿಚ್ಚಿ ಮಾತನಾಡಿ ಒಮ್ಮೆ ವಿಷ್ಣುವರ್ಧನ್ ಅವರೇ "ನಾವಿಬ್ಬರೂ ಬಾಳ ಸಂಗಾತಿಗಳಾಗೊಣವೇ "ಎಂಬ ಪ್ರಸ್ತಾಪ ಮುಂದಿಟ್ಟಿದ್ದರು. ಫೆಬ್ರವರಿ 27, 1975 ರಲ್ಲಿ ಈ ಪ್ರೀತಿಯ ಪಯಣ ವಿವಾಹದ ತನಕ ಸಾಗುತ್ತದೆ.
ಒಮ್ಮೆ ಭಾರತಿಯವರು ವಿಷ್ಣುವರ್ಧನ್ ಅವರನ್ನು ಕುರಿತು ನನ್ನ ಪ್ರಶ್ನೆಗೆ ಒಂದೇ ಸಾಲಿನಲ್ಲಿ ವಿವರಿಸಿದ್ದು ಹೀಗೆ "ಅವರ ಮನಸ್ಸು ಒಂದು ರೀತಿಯಲ್ಲಿ ಮಗುವಿನ ಮನಸ್ಸೇ. ಅದನ್ನು ನೋಯಿಸದಂತೆ ಬದುಕಿದ್ದೇ ನಮ್ಮ ದಾಂಪತ್ಯ ಜೀವನದ ಯಶಸ್ಸಿನ ಸಂಕೇತ.."