Search


ಅಲ್ಪಸಂಖ್ಯಾತರ ಮತದಾನದ ಹಕ್ಕು ಕಸಿಯಲು ವಿರೋಧ ಪಕ್ಷಗಳ ಕುತಂತ್ರ; ಆರೋಪಗಳಿಗೆ ಡಿಕೆ ಖಡಕ್ ರಿಯಾಕ್ಷನ್

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆ ಬಗ್ಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು. ಕಾಂಗ್ರೆಸ್ ನಿಯಮ ಬಾಹಿರವಾಗಿ ಸಾಮೂಹಿಕವಾಗಿ SIR ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಇದರ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು. "ಎಸ್ಐಆರ್ ಪ್ರಕ್ರಿಯೆಗೆ ನಮ್ಮ ವಿರೋಧವಿದ್ದರೂ ಜನರ ಮತದಾನದ ಹಕ್ಕು ರಕ್ಷಣೆಗಾಗಿ ನಮ್ಮ ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಇದು ಚುನಾವಣಾ ಆಯೋಗದ ಪ್ರಕ್ರಿಯೆಯಾಗಿದ್ದು, ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ. ಆದರೆ ಬಡವರು ಹಾಗೂ ಅಲ್ಪಸಂಖ್ಯಾತರ ಮತದಾನದ ಹಕ್ಕು ಕಸಿಯುವುದು ವಿರೋಧ ಪಕ್ಷಗಳ ಕುತಂತ್ರ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿರುಗೇಟು ನೀಡಿದರು.

ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಸಿದ ಡಿಕೆ ಶಿವಕುಮಾರ್ “ಎಲ್ಲಾ ಪಕ್ಷದವರು ಬಿಎಲ್ಎ2 ನೇಮಕ ಮಾಡಲು ಚುನಾವಣಾ ಆಯೋಗವೇ ಅವಕಾಶ ನೀಡಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜನತಾದಳದವರು ಬಿಎಲ್ಎ ನೇಮಕ ಮಾಡಿದ್ದಾರೆ. ಸಂಘ ಸಂಸ್ಥೆಗಳು ನೆರವು ನೀಡಲು ಅವಕಾಶ ಕಲ್ಪಿಸಲಾಗಿದೆ. ಅಧಿಕಾರಿಗಳು ತಮಗೆ ಆಯೋಗದಿಂದ ಬಂದಿರುವ ಮಾರ್ಗದರ್ಶನದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದನ್ನು ನೋಡಿ ವಿರೋಧ ಪಕ್ಷಗಳಿಗೆ ಭಯ ಶುರುವಾಗಿದೆ. ಚುನಾವಣಾ ಆಯೋಗದ ಮೇಲೆ ಅವರಿಗೇ ನಂಬಿಕೆ ಇಲ್ಲ ಎಂದು ಅವರು ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ರದ್ದು ಮಾಡಲು ಹೇಳುತ್ತಿದ್ದಾರೆ. ಇದು ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ” ಎಂದು ತಿಳಿಸಿದರು.

ಇನ್ನು ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು “ರಾಜ್ಯದಲ್ಲಿ ಸುಮಾರು 4.50 ಕೋಟಿ ಜನ ಜಾತಿ ಪ್ರಮಾಣಪತ್ರ ತೆಗೆದುಕೊಂಡಿದ್ದಾರೆ. ಇದನ್ನು ಆನ್ ಲೈನ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದ್ದೇವೆ. ಇನ್ನು ನಿವಾಸ ದೃಢೀಕರಣ ಪತ್ರ ನೀಡಲು ಉಪ ತಹಶೀಲ್ದಾರ್ ಅವರಿಗೆ ಅಧಿಕಾರ ನೀಡಲಾಗಿದೆ. 2002ನೇ ಮತಪತ್ರ ದಾಖಲೆ ಯಾರ ಬಳಿಯೂ ಇರುವುದಿಲ್ಲ. ಇದನ್ನು ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಸರ್ಕಾರ ಕರ್ನಾಟಕ ಜನರ ಮತದಾನದ ಹಕ್ಕು ಉಳಿಸಿಕೊಳ್ಳಲು ಕರೆ ನೀಡುತ್ತಿದೆ. ವಿರೋಧ ಪಕ್ಷಗಳು ಸುಮ್ಮನೆ ಅಕ್ರಮ ಬಾಂಗ್ಲಾ ವಲಸಿಗರು ಎಂದು ಹೇಳುತ್ತಿದ್ದಾರೆ. ನಿಮ್ಮ ಕೈಯಲ್ಲಿ ಅಧಿಕಾರ ಇದ್ದಾಗ ಯಾಕೆ ಅವರನ್ನು ಓಡಿಸಲಿಲ್ಲ? ಆಗ ಯಾರು ತಡೆದಿದ್ದರು?” ಎಂದು ಪ್ರಶ್ನಿಸಿದರು.

 ಎಸ್ಐಆರ್ ವಿಚಾರವಾಗಿ ಕುಮಾರಸ್ವಾಮಿ ಹಾಗೂ ಪ್ರಹ್ಲಾದ್ ಜೋಷಿ ಅವರು ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿರುವ ಬಗ್ಗೆ ಕೇಳಿದಾಗ, “ಎಸ್ಐಆರ್ ವಿಚಾರದಲ್ಲಿ ನಮ್ಮದೇ ಆದ ಭಿನ್ನಾಭಿಪ್ರಾಯವಿದೆ. ನಾವು ಕೋರ್ಟ್ ನಲ್ಲಿ ನಮ್ಮ ವಾದ ಸಲ್ಲಿಸಿದ್ದು, ನ್ಯಾಯಾಲಯ ಈ ವಿಚಾರವಾಗಿ ತೀರ್ಪು ನೀಡಿದ್ದಾರೆ.

ಈ ಪ್ರಕ್ರಿಯೆ ವೇಳಾಪಟ್ಟಿ ಬಗ್ಗೆ ನಮಗೆ ಅಸಮಾಧಾನವಿದ್ದು, ಅದರ ವಿರುದ್ಧವೂ ಕೋರ್ಟ್ ಮೊರೆ ಹೋಗುತ್ತೇವೆ. ನಾವು ಎಲ್ಲರಿಗೂ ಮತದಾನದ ಹಕ್ಕು ರಕ್ಷಣೆ ಮಾಡಬೇಕು ಎಂದು ನಮ್ಮ ಸರ್ಕಾರ ಚುನಾವಣಾ ಆಯೋಗದ ಜೊತೆ ಕೈ ಜೋಡಿಸಿದೆ. ನಮ್ಮಂತೆ ಬೇರೆ ಯಾವುದೇ ರಾಜ್ಯದಲ್ಲಿ ಈ ರೀತಿ ಸಹಕಾರ ನೀಡಿಲ್ಲ. ನಿಮ್ಮ ಮತದಾನದ ಹಕ್ಕು, ಬದುಕಿನ ಹಕ್ಕು ಎಂದು ಹೇಳುವ ಮೂಲಕ ಜನರಿಗೆ ಮತದಾನದ ಹಕ್ಕು ಉಳಿಸಿಕೊಳ್ಳಲು ಸರ್ಕಾರ ಜಾಗೃತಿ ಮೂಡಿಸುತ್ತಿದ್ದೇವೆ” ಎಂದು ವಿವರಿಸಿದರು

By Ravikumar - 07-07-2026


Ads in Post