ತಿರುವನಂತಪುರಂ : ಕೇರಳದ, ಕೊಟ್ಟಿಯೂರು ದೇವಾಸ್ಥಾನದಲ್ಲಿ(Kottiyoor Temple) ಕನ್ನಡಿಗರ ಮೇಲೆ ದುರ್ವರ್ತನೆ ತೋರಿದ ಆರೋಪ ಕೇಳಿ ಬಂದಿದ್ದು, ಕೊಟ್ಟಿಯೂರು ದೇವಾಲಯಕ್ಕೆ ಭೇಟಿ ನೀಡಿದ್ದ ಭಕ್ತರು ಈ ಕುರಿತಾಗಿ ತಮ್ಮ ಅಸಮಮಧಾನ ತೋಡಿಕೊಂಡಿದ್ದಾರೆ. ಕೆಲವು ಭಕ್ತರು ಈ ಕುರಿತಾದ ವಿಡಿಯೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು. ಈ ವಿಡಿಯೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಕೊಟ್ಟಿಯೂರು ದೇವಾಲಯದ ಹಿನ್ನಲೆ..!
ಕೇರಳದ ಕಣ್ಣೂರಿನಲ್ಲಿರುವ ಕೊಟ್ಟಿಯೂರು ದೇವಾಲಯ, ಶಿವನಿಗೆ ಸಮರ್ಪಿತವಾಗಿರುವ ದೇವಾಲಯವಾಗಿದೆ. ಕೊಟ್ಟಿಯೂರು ದೇವಸ್ಥಾನವು ವರ್ಷದಲ್ಲಿ ಕೇವಲ 28 ದಿನಗಳ ಕಾಲ (ಮೇ ಅಥವಾ ಜೂನ್ ತಿಂಗಳಲ್ಲಿ) ನಡೆಯುವ ವೈಶಾಖ ಮಹೋತ್ಸವದ ಸಮಯದಲ್ಲಿ ಮಾತ್ರ ಭಕ್ತರಿಗೆ ಪ್ರವೇಶವಿರುತ್ತದೆ. ಈ ವೇಳೆ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಆಗಮಸಲಿದ್ದು, ಕೇರಳವಲ್ಲದೆ, ಇತರೆ ರಾಜ್ಯಗಳ ಜನರು ಆಗಮಿಸುತ್ತಾರೆ, ಕಳೆದ ಕೆಲ ವರ್ಷಗಳಿಂದ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ದುಪ್ಪಟ್ಟಾಗಿದ್ದು, ದೇವಾಲಯದ ಸ್ಥಳದಲ್ಲಿ ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತಿದೆ.
ಕನ್ನಡಿಗರ ಭಕ್ತರ ಮೇಲೆ ದಬ್ಬಾಳಿಕೆ...!
ಕೊಟ್ಟಿಯೂರಿಗೆ ಕರ್ನಾಟಕದಿಂದಲೂ ಸಾವಿರಾರು ಭಕ್ತರು ಭೇಟಿ ನೀಡಿ, ಶಿವನ ದರ್ಶನ ಪಡೆಯುತ್ತಿದ್ದಾರೆ. ಆದರೆ ಈ ಬಾರಿ ರಾಜ್ಯದಿಂದ ಹೋಗಿರುವ ಕನ್ನಡಿಗರು (Kannadigas) ಇಲ್ಲಿಗೆ ಯಾವುದೇ ಕಾರಣಕ್ಕೂ ಬರಬೇಡಿ ಅಂತ ಮನವಿ ಮಾಡ್ತಿದ್ದಾರೆ. ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ, ದೇವರ ದರ್ಶನಕ್ಕೆ ಪರದಾಡುವಂತಾಗಿದೆ. ಜೊತೆಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭದ್ರತಾ ಸಿಬ್ಬಂದಿ ವರ್ತನೆಗೆ ಕರ್ನಾಟಕದ ಭಕ್ತರು ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋಗಳು, ದೇವಸ್ಥಾನ ಆಡಳಿತ ಮಂಡಳಿ ಹಾಗೂ ಭದ್ರತಾ ಸಿಬ್ಬಂದಿ ಮಹಿಳೆಯರನ್ನು ತಳ್ಳುತ್ತಿರುವುದು, ಭಕ್ತರ ಮೇಲೆ ಕಾಲಿನಿಂದ ನೀರು ಎರಚಿ ವಿಕೃತಿ ಮೆರೆಯುತ್ತಿರುವುದನ್ನು ತೋರಿಸುತ್ತಿವೆ. ಸರತಿ ಸಾಲಿನಲ್ಲಿ ತಳ್ಳಾಟ-ನೂಕಾಟಗಳು ನಡೆಯುತ್ತಲೇ ಇವೆ.
ಕನ್ನಡಿಗರೊಂದಿಗೆ ಅನಗತ್ಯವಾಗಿ ಕಠಿಣ ವರ್ತನೆ ತೋರಲಾಗುತ್ತಿದೆ. ದೇವರ ದರ್ಶನ ಪಡೆಯಲು ಸಾಲಿನಲ್ಲಿ ನಿಂತಿರುವಾಗ ನೂಕಾಟವಾಗುತ್ತಿದೆ. ಕರ್ನಾಟಕದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರೂ, ಕನ್ನಡಿಗರಿಗೆ ಸೂಕ್ತ ಗೌರವ ನೀಡಲಾಗುತ್ತಿಲ್ಲ. ಟಿಕೆಟ್ಗೆ 1000 ರೂ. ಕೊಟ್ಟರೂ ಸರಿಯಾಗಿ ದೇವರ ದರ್ಶನಕ್ಕೆ ಅವಕಾಶ ಸಿಗುತ್ತಿಲ್ಲ ಎಂಬ ಆರೋಪಗಳು ಸೋಶಿಯಲ್ ಮೀಡಿಯಾಗಳಲ್ಲಿ ಕೇಳಿಬರುತ್ತಿವೆ.