Search


ಪ್ಯಾರಿಸ್ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ; ಟ್ರಂಪ್‌ ವಿವಾದಾತ್ಮಕ ಹೇಳಿಕೆ

ವಾಷಿಂಗ್ಟನ್: ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ ಶೀಘ್ರದಲ್ಲೇ ಮುಸ್ಲಿಂ ನಗರವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ. ಫ್ರಾನ್ಸ್‌ನಲ್ಲಿ ಉಂಟಾಗಿರುವ ಅಶಾಂತಿಗೆ ವಲಸೆಯೇ ಪ್ರಮುಖ ಕಾರಣ ಎಂದು ಆರೋಪಿಸಿರುವ ಅವರು, ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ವಲಸೆ ನೀತಿಗಳ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.

ಅಕ್ಟೋಬರ್ 19ರಂದು ‘ಮರೀನ್ ಒನ್’ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವ ಮುನ್ನ ಶ್ವೇತಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಫ್ರಾನ್ಸ್‌ನಲ್ಲಿನ ಪರಿಸ್ಥಿತಿಯ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಸಂವಾದದ ತುಣುಕನ್ನು ‘ಫಾಕ್ಸ್ ನ್ಯೂಸ್’ ತನ್ನ ‘ಎಕ್ಸ್’ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪ್ರಕಟಿಸಿದೆ.

ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ತಮ್ಮ ಸ್ನೇಹಿತ ಎಂದು ಹೇಳಿದ ಟ್ರಂಪ್, ಹಲವು ವರ್ಷಗಳ ಹಿಂದೆಯೇ ವಲಸೆ ನೀತಿಗಳ ಕುರಿತು ಅವರಿಗೆ ಎಚ್ಚರಿಕೆ ನೀಡಿದ್ದಾಗಿ ತಿಳಿಸಿದ್ದಾರೆ. ವಿಶ್ವದ ವಿವಿಧ ಭಾಗಗಳಿಂದ ಜನರು ಫ್ರಾನ್ಸ್‌ಗೆ ಪ್ರವೇಶಿಸಲು ಅವಕಾಶ ನೀಡುವ ಬದಲು, ದೇಶದ ಗಡಿಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕೆಂದು ತಾವು ಸಲಹೆ ನೀಡಿದ್ದೆ ಎಂದು ಹೇಳಿದ್ದಾರೆ.

ಅಮೆರಿಕ ತನ್ನ ಗಡಿಗಳನ್ನು ಮುಚ್ಚುವ ಮೂಲಕ ವಲಸೆಯನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದೆ. ಆದರೆ, ಫ್ರಾನ್ಸ್ ಈ ವಿಚಾರದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗಿದೆ ಎಂಬುದು ಟ್ರಂಪ್ ಅವರ ಆರೋಪವಾಗಿದೆ. ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಅಶಾಂತಿಗೆ ವಲಸಿಗರ ಆಗಮನವೇ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ಫ್ರಾನ್ಸ್ ಎದುರಿಸುತ್ತಿರುವ ಇಂಧನ ಸಂಬಂಧಿತ ಸಮಸ್ಯೆಗಳ ಬಗ್ಗೆಯೂ ಟ್ರಂಪ್ ಪ್ರಸ್ತಾಪಿಸಿದ್ದಾರೆ. ದೇಶದ ಗಡಿ ನಿಯಂತ್ರಣದ ವಿಚಾರದಲ್ಲಿ ಮ್ಯಾಕ್ರನ್ ಇನ್ನಷ್ಟು ಮೊದಲೇ ಕ್ರಮ ಕೈಗೊಳ್ಳಬೇಕಿತ್ತು ಎಂದು ಅವರು ಪುನರುಚ್ಚರಿಸಿದ್ದಾರೆ. 

By Reporter Desk - 20-10-2026


Ads in Post