ನವದೆಹಲಿ: ಸಂಸತ್ ಮುಂಗಾರು ಅಧಿವೇಶನಕ್ಕೆ (Parliament Session) ದಿನಾಂಕ ನಿಗದಿಯಾಗಿದ್ದು, ಇದೇ ಜುಲೈ 20ರಿಂದ ಆರಂಭವಾಗಿ ಆಗಸ್ಟ್ 13ರವರೆಗೆ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ಮೋದಿ ಸರ್ಕಾರವನ್ನ ಕಟ್ಟಿಹಾಕಲು ಕಾಂಗ್ರೆಸ್ ಸೇರಿದಂತೆ ವಿಪಕ್ಷ ನಾಯಕರು ಸಿದ್ದತೆ ನಡೆಸಿದ್ದು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಸಿಬಿಎಸ್ಸಿ ಹಗರಣ, ಎಸ್ಐಆರ್ ಕುರಿತು ಚರ್ಚೆ ನಡೆಸಲು ಹಠ ಹಿಡಿಯುವ ಸಾಧ್ಯತೆ ಇದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು (Kiren Rijiju) ಈ ಕುರಿತು ಮಾಹಿತಿ ನೀಡಿದ್ದು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅನುಮೋದನೆ ಬಳಿಕ ಈ ಕುರಿತು ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಸುಮಾರು 4 ವಾರಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ 19 ಕಲಾಪಗಳು ನಡೆಯುವ ಸಾಧ್ಯತೆ ಇದ್ದು, ಹಲವು ಮಹತ್ವದ ಮಸೂದೆಗಳು ಹಾಗೂ ರಾಷ್ಟ್ರೀಯ ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ. ಈ ಬಾರಿಯ ಅಧಿವೇಶನ ರಾಜಕೀಯವಾಗಿ ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾಗುವ ಸಾಧ್ಯತೆ ಇದೆ.
ಪ್ರತಿಪಕ್ಷಗಳು ಸರ್ಕಾರವನ್ನ ಹಲವು ಜನಪ್ರಿಯ ಹಾಗೂ ವಿವಾದಾತ್ಮಕ ವಿಷಯಗಳ ಕುರಿತು ತರಾಟೆಗೆ ತೆಗೆದುಕೊಳ್ಳಲು ಸಜ್ಜಾಗಿವೆ. ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ, ಹಣದುಬ್ಬರ, ಇಂಧನ ಬೆಲೆ ಏರಿಕೆ, ನಿರುದ್ಯೋಗ, ಕೃಷಿ ಸಮಸ್ಯೆಗಳು ಹಾಗೂ ಇತರ ವಿಷಯಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಇಂಡಿಯಾ ಮೈತ್ರಿಕೂಟ ನಿರ್ಧರಿಸಿದೆ.
ಡಿಲಿಮಿಟಿಶೇನ್ ಮಸೂದೆ ಮಂಡನೆ..?
ಲೋಕಸಭೆ (Lok Sabh) ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಜಾರಿಗೆ ಸಂಬಂಧಿಸಿದ ಸಂವಿಧಾನ 130ನೇ ತಿದ್ದುಪಡಿ ಮಸೂದೆ ಹಾಗೂ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗಳನ್ನ ಕೇಂದ್ರ ಸರ್ಕಾರ ಮತ್ತೊಮ್ಮೆ ಮಂಡಿಸಲು ಸಿದ್ಧತೆ ನಡೆಸಿದೆ. ಈ ಮಸೂದೆಗಳಿಗೆ ಅಗತ್ಯ ಬೆಂಬಲ ಪಡೆಯಲು ಆಡಳಿತಾರೂಢ ಎನ್ಡಿಎ ಸರ್ಕಾರ (NDA Government) ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ.