Search


ಪವಿತ್ರಾ ನನಗೆ ಮಗಳ ಸಮಾನ; ಜೈಲಿಗೆ ಭೇಟಿ ನೀಡಿ ಬಂದ ನಾಗಲಕ್ಷ್ಮಿ ಚೌದರಿ ಹೇಳಿಕೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಸೇರಿರುವ ನಟಿ ಪವಿತ್ರಾ ಗೌಡರನ್ನ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಭೇಟಿಯಾಗಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ಪರಿಶೀಲನೆ ನಡೆಸಲು ಎಂದು ತೆರಳಿದ್ದ ವೇಳೆ ಈ ಭೇಟಿಯಾಗಿದ್ದು, ಈ ಕುರಿತು ನಾಗಲಕ್ಷ್ಮಿ ಚೌದರಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ, ಈ ವೇಳೆ ʻಜೈಲನಲ್ಲಿರುವ ಪವಿತ್ರಾ ಸಾಕಷ್ಟು ಕುಗ್ಗಿದ್ದಾರೆ, ಪವಿತ್ರಾ ನನಗೆ ಮಗಳ ಸಮಾನʼ ಎಂದು ಹೇಳಿದ್ದಾರೆ. 

ರೇಣುಕಸ್ವಾಮಿ (Renuka Swamy) ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಇತ್ತೀಚೆಗಷ್ಟೆ ತೀವ್ರ ಜ್ವರದಿಂದ ನರಳಿದ್ದ ಪವಿತ್ರಾ ಗೌಡ ವಿಚಾರಣೆ ಗೈರಾಗಿದ್ದರು. ನಿನ್ನೆ ಪರಪ್ಪನ ಅಗ್ರಹಾರ ಬಂಧಿಖಾನೆಗೆ ಭೇಟಿ ಮಹಿಳಾ ಬ್ಯಾರಕ್​​ಗಳ ವೀಕ್ಷಣೆ ಮಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಮಾಧ್ಯಮಗಳೊಟ್ಟಿಗೆ ಮಾತನಾಡಿ, ಬ್ಯಾರಕ್​​ಗಳ ಸ್ಥಿತಿಯ ಬಗ್ಗೆ ಮಾಹಿತಿ ನೀಡುವ ಜೊತೆಗೆ ಕೈದಿಗಳೊಟ್ಟಿಗೆ ಮಾತನಾಡಿ ಅಭಿಪ್ರಾಯ ಸಂಗ್ರಹಿಸಿದ್ದಾಗಿಯೂ ಹೇಳಿದರು. 

ಈ ವೇಳೆ ಪವಿತ್ರಾ ಬಗ್ಗೆ ಮಾತನಾಡಿದ ಅವರು ‘ಪವಿತ್ರಾ ಗೌಡ ಸೇರಿದಂತೆ ಹಲವು ಕೈದಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡೆ. ಅವರ ಸ್ಥಿತಿ ಹೇಳಬಾರದು. ಪವಿತ್ರಾ ನನಗೆ ಮಗಳ ಸಮಾನ. ಕಾನೂನು ಪ್ರಕಾರ ಏನು ಆಗಬೇಕೊ ಅದು ಆಗುತ್ತದೆ. ಅವರು ಸಾಕಷ್ಟು ನೊಂದಿದ್ದಾರೆ’ ಎಂದರು ನಾಗಲಕ್ಷ್ಮಿ. ಇತರೆ ಮಹಿಳಾ ಕೈದಿಗಳ ಜೊತೆಗೂ ಮಾತನಾಡಿದ್ದು ಮಾಹಿತಿ ಪಡೆದಿದ್ದೇನೆ. ಮಹಿಳೆಯರು ಭಾವನಾತ್ಮಕ ಜೀವಿಗಳು, ಹಲವಾರು ಮಂದಿ ಮಾನಸಿಕವಾಗಿ ಕುಗ್ಗಿದ್ದಾರೆ’ ಎಂದರು.

ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ ವೇಳೆ ನಾಗಲಕ್ಷ್ಮಿ ಅವರು ಕೈದಿಗಳಿಗೆ ನೀಡುವ ಊಟ, ಸೋಪು, ಪೇಸ್ಟ್‌ ಸೇರಿದಂತೆ ಇತರೆ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದ್ದಾಗಿ ಹೇಳಿದ್ದಾರೆ. ಜೊತೆಗೆ ಜೈಲಿನಲ್ಲಿ ವಿಪರೀತ ಸೊಳ್ಳೆ ಕಾಟ ಇರುವ ಬಗ್ಗೆ ಕೈದಿಗಳು ಅಳಲು ತೋಡಿಕೊಂಡಿದ್ದು, ಅದಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಜೈಲಿನ ಸಿಬ್ಬಂದಿಗೆ ನಾಗಲಕ್ಷ್ಮಿ ಚೌದರಿ ಅವರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

By Ravikumar - 19-08-2026


Ads in Post