ಕಲಬುರಗಿ: ತೊಗರಿ ಕಣಜ ಕಲಬುರಗಿಯಲ್ಲಿ ಮಳೆ ಕೊರತೆಯಿಂದ ತೊಗರಿ ಬೆಳೆಯ ಇಳುವರಿ ಕುಸಿದಿದ್ದು, ತೊಗರಿ ಬೇಳೆಯ ಬೆಲೆ ಗಗನಕ್ಕೇರಿದೆ. ಎಲ್ ನಿನೋ ಪರಿಣಾಮ ಹಾಗೂ ಮುಂಗಾರು ಮಳೆಯ ಕೊರತೆಯಿಂದ ಉತ್ಪಾದನೆ ಕುಸಿದಿರುವುದು ಬೆಲೆ ಏರಿಕೆಗೆ ಪ್ರ ಮುಖ ಕಾರಣವಾಗಿದೆ. ಕಳೆದ 15 ದಿನಗಳಲ್ಲಿ ಸಾಮಾನ್ಯ ಗುಣಮಟ್ಟದ ತೊಗರಿ ಬೇಳೆಯ ಬೆಲೆ ಪ್ರತಿ ಕೆಜಿಗೆ 30 ರೂಪಾಯಿ ಏರಿಕೆಯಾಗ ಿದ್ದು, ಅಕ್ಟೋಬರ್ 1ರಂದು 110 ರೂಪಾಯಿ ಇದ್ದ ಬೆಲೆ ಇದೀಗ 140 ರೂಪಾಯಿಗೆ ತಲುಪಿದೆ. ಪ್ರೀಮಿಯಂ ಗುಣಮಟ್ಟದ ತೊಗರಿ ಬೇಳೆಯ ಬೆಲೆಯೂ 146 ರೂಪಾಯಿಯಿಂದ 160 ರೂಪಾಯಿಗೆ ಹೆಚ್ಚಳವಾಗಿದೆ.
ಕಚ್ಚಾ ತೊಗರಿಯ ಬೆಲೆಯಲ್ಲಿಯೂ ಏರಿಕೆ ಕಂಡುಬಂದಿದೆ. ಕಳೆದ ತಿಂಗಳು ಪ್ರತಿ ಕ್ವಿಂಟಲ್ ತೊಗರಿಗೆ ಕನಿಷ್ಠ 7,100 ರೂಪಾಯಿಯಿಂದ ಗರಿಷ್ಠ 9,500 ರೂಪಾಯಿವರೆಗೆ ಬೆಲೆ ಇತ್ತು. ಅಕ್ಟೋಬರ್ 1ರ ವೇಳೆಗೆ ಕನಿಷ್ಠ ಬೆಲೆ 8,500 ರೂಪಾಯಿ ಹಾಗೂ ಗರಿಷ್ಠ ಬೆಲೆ 10,000 ರೂಪಾಯಿಗೆ ತಲುಪಿತ್ತು. ಮಳೆ ಕೊರತೆಯಿಂದ ಉತ್ಪಾದನೆ ಕುಸಿದಿರುವುದರ ಜೊತೆಗೆ ಹಬ್ಬಗಳ ಸಂದರ್ಭದಲ್ಲಿ ಬೇಡಿಕೆ ಹೆಚ್ಚಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿಯೂ ತೊಗರಿ ಬೇಳೆಯ ಬೆಲೆ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 6.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಮಳೆಯ ಕೊರತೆಯಿಂದ ಕೇವಲ 5.34 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಬರದ ಪರಿಸ್ಥಿತಿಯಿಂದಾಗಿ ಬಿತ್ತನೆ ಮಾಡಿದ್ದ ಬೆಳೆಯೂ ಹಾನಿಗೊಳಗಾಗಿದ್ದು, ಒಟ್ಟು 5.34 ಲಕ್ಷ ಹೆಕ್ಟೇರ್ ಪ್ರದೇಶದ ಪೈಕಿ ಸುಮಾರು 4.04 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ನಷ್ಟವಾಗಿದೆ ಎಂದು ವರದಿಯಾಗಿದೆ. ಇದರಿಂದ ತೊಗರಿ ಉತ್ಪಾದನೆಗೆ ಭಾರಿ ಹೊಡೆತ ಬಿದ್ದಿದೆ.
ಒಂದೆಡೆ ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರೆ, ಮತ್ತೊಂದೆಡೆ ತೊಗರಿ ಬೇಳೆಯ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಸಾಲು ಸಾಲು ಹಬ್ಬಗಳ ಸಂದರ್ಭದಲ್ಲಿ ಅಗತ್ಯ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗಿರುವುದು ಜನಸಾಮಾನ್ಯರ ಕುಟುಂಬದ ಬಜೆಟ್ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ರೈತರ ನೆರವಿಗೆ ಧಾವಿಸಿ, ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.