ಬೆಂಗಳೂರು: ಶಿವಾಜಿನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಜಿಬಿಎ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಪಡುಕೋಟೆ ವಿರುದ್ಧ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಪ್ರಕರಣದ ಬೆನ್ನಲ್ಲೇ ಜಿಬಿಎ ಅಧಿಕಾರಿಗಳು ಅವರ ಕಚೇರಿ, ಮನೆ ಹಾಗೂ ಇತರೆ ಆಸ್ತಿಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಈ ವೇಳೆ ಆರೋಪಿ ಬಸವರಾಜ್ ಪುಟ್ ಪಾಥ್ ವ್ಯಾಪಾರಿಗಳಿಂದ ಹಫ್ತಾ ವಸೂಲಿ ಮಾಡ್ತಿದ್ದನಾ ಎಂಬ ಆಯಾಮದ ಮೇಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಕನ್ನಡ ಸಂಘದ ಹೆಸರನ್ನು ಬಳಸಿಕೊಂಡು ಸ್ಥಳೀಯ ಫುಟ್ಪಾತ್ ವ್ಯಾಪಾರಿಗಳಿಂದ ಹಣ ವಸೂಲಿ ಮಾಡಲಾಗುತ್ತಿತ್ತು ಎಂಬ ಆರೋಪಗಳು ಕೇಳಿಬಂದಿವೆ. ಈ ಮೂಲಕ ಸಂಗ್ರಹಿಸಿದ ಹಣದ ಆಧಾರದಲ್ಲಿ ಸ್ಥಳೀಯವಾಗಿ ಪ್ರಭಾವ ಬೆಳೆಸಿಕೊಂಡಿದ್ದಾರೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜ್ ಪಡುಕೋಟೆ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದು, ಅವರ ವಿರುದ್ಧದ ದಾಖಲೆಗಳು ಹಾಗೂ ಆರ್ಥಿಕ ವ್ಯವಹಾರಗಳನ್ನು ಪರಿಶೀಲಿಸಲಾಗುತ್ತಿದೆ.
ಜೊತೆಗೆ, ಬೌರಿಂಗ್ ಆಸ್ಪತ್ರೆ ಸಮೀಪದ ಕಚೇರಿಯು ನಿಯಮಾನುಸಾರ ಕಾರ್ಯನಿರ್ವಹಿಸುತ್ತಿದೆಯೇ, ಅಗತ್ಯ ಪರವಾನಗಿ ಪಡೆದಿದೆಯೇ ಎಂಬುದನ್ನೂ ಜಿಬಿಎ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಅಕ್ರಮ ಕಂಡುಬಂದರೆ ಕಚೇರಿಯನ್ನು ಸೀಜ್ ಮಾಡುವ ಸಾಧ್ಯತೆಯೂ ಇದೆ. ಇದರ ಜೊತೆಗೆ, ಬಸವರಾಜ್ ಪಡುಕೋಟೆ ಅವರ ಮನೆ ಹಾಗೂ ಇತರೆ ಆಸ್ತಿಗಳು ಕಟ್ಟಡ ನಿಯಮಗಳಿಗೆ ಅನುಗುಣವಾಗಿವೆಯೇ, ತೆರಿಗೆ ಪಾವತಿಯಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಯಾವುದೇ ಅಕ್ರಮ ಪತ್ತೆಯಾದರೆ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.