ವಾಷಿಂಗ್ಟನ್: ಭಾರತದಲ್ಲಿ ಜನನ ಪ್ರಮಾಣ (Birth Rate) ಗಣನೀಯವಾಗಿ ಕುಸಿತವಾಗುತ್ತಿದೆ ಎಂದು ದಿಗ್ಗಜ ಉದ್ಯಮಿ ಎಲಾನ್ ಮಸ್ಕ್ (Elon Musk) ಆತಂಕ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಜನನ ಪ್ರಮಾಣದ ದರ ಕುಸಿತ ಕಂಡಿದೆ. ಭಾರತದ ಜನಸಂಖ್ಯೆಯನ್ನು ಯಥಾಸ್ಥಿತಿ ಕಾಯ್ದುಕೊಳ್ಳಲು ಅಗತ್ಯವಿರುವುದಕ್ಕಿಂತಲೂ ಇಳಿಕೆ ಆಗಿದೆ. ಅದರಲ್ಲೂ ವಿಶೇಷವಾಗಿ ಭಾರತದ ವಿದ್ಯಾವಂತ ಕುಟುಂಬ ಅಥವಾ ಸಮುದಾಯಗಳಲ್ಲಿ ಈ ದರವು ಹಲವು ವರ್ಷಗಳ ಹಿಂದೆಯೇ ಕುಸಿದಿತ್ತು ಎಂದು ಎಕ್ಷ್ನಲ್ಲಿ ಬರೆದುಕೊಂಡಿದ್ದಾರೆ.
ನಿಗದಿತ ಮಟ್ಟಕ್ಕಿಂತ ಕೆಳಗೆ ಇಳಿದಿದೆ ಜನನ ಪ್ರಮಾಣ..!
India’s birth rate has fallen below replacement.
— Elon Musk (@elonmusk) June 6, 2026
Among those most educated, India’s birth rate fell below replacement many years ago. https://t.co/RsWf0PK6wx
ಇತ್ತೀಚಿನ ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಮ್ ವರದಿಯ ಪ್ರಕಾರ, ಭಾರತದಲ್ಲಿ ಸಂತಾನೋತ್ಪತ್ತಿ ಪ್ರಮಾಣ 2.1ರಿಂದ 1.9ಕ್ಕೆ ಇಳಿಕೆ ಕಂಡಿದೆ. ಸಾಮಾನ್ಯವಾಗಿ ಇದು ನಿಗದಿತ ಮಟ್ಟಕ್ಕಿಂತ ಕಡಿಮೆ ಇದ್ದು. ದೇಶದ ಸರಾಸರಿ ಈ ಮಟ್ಟಕ್ಕಿಂತ ಇಳಿಕೆಯಾಗಿರುವುರಿಂದ ಮುಂದಿನ ದಿನಗಳಲ್ಲಿ ಜನಸಂಖ್ಯೆಯ ಬೆಳವಣಿಗೆ ಕುಂಠಿತಗೊಳ್ಳಲಿದೆ. ಆದರೆ ಸದ್ಯಕ್ಕೆ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ ಮತ್ತು ಜಾರ್ಖಂಡ್ ಕೇವಲ ಆರು ರಾಜ್ಯಗಳಲ್ಲಿ ಮಾತ್ರ ಜನನ ಪ್ರಮಾಣ ನಿಗದಿತ ಮಟ್ಟಕ್ಕಿಂತ ಹೆಚ್ಚಾಗಿದೆ ಉಳಿದೆಲ್ಲಾ ರಾಜ್ಯಗಳಲ್ಲಿ ಇದು ತೀವ್ರವಾಗಿ ಕುಸಿತವಾಗಿದೆ ಎಂದು ಎಲಾನ್ ಮಸ್ಕ್ ಬರೆದುಕೊಂಡಿದ್ದಾರೆ.
ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಬರೋಬ್ಬರಿ 146 ಕೋಟಿ ಜನರಿದ್ದಾರೆ. ಆದರೆ ಇದರ ಹೊರತಾಗಿಯೂ ಇತ್ತೀಚಿನ ವರ್ಷಗಳಲ್ಲಿ ಯುವ ಜೋಡಿಗಳು ಕಡಿಮೆ ಮಕ್ಕಳನ್ನ ಹೊಂದುವ ಸಂಪ್ರದಾಯದತ್ತ ಹೆಜ್ಜೆ ಇಡುತ್ತಿದ್ದು, ಇದು ಹೀಗೆಯೇ ಮುಂದುವರಿದರೆ ಭವಿಷ್ಯದಲ್ಲಿ ಯುವಕರ ಸಂಖ್ಯೆ ಕಡಿಮೆಯಾಗಿ ವೃದ್ದರ ಸಂಖ್ಯೆ ಹೆಚ್ಚಾಗಲಿದೆ, ಇದು ದೇಶದಲ್ಲಿ ದುಡಿಯುವ ಕೈಗಳ ಕೊರತೆಗೆ ಕಾರಣವಾಗಬಹುದು. ಅಷ್ಟೇ ಅಲ್ಲದೇ ಪಿಂಚಣಿ ಮತ್ತು ಆರೋಗ್ಯ ವ್ಯವಸ್ಥೆ ಮೇಲೂ ಇದು ಭಾರಿ ಒತ್ತಡ ಉಂಟು ಮಾಡುತ್ತದೆ ಎಂದು ತಜ್ಙರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾನ್ಯವಾಗಿ ಹಲವರು ಜನನ ದರ ಮತ್ತು ಸಂತಾನೋತ್ಪತ್ತಿ ದರ ಎರಡನ್ನೂ ಒಂದೇ ಎಂದು ಭಾವಿಸುತ್ತಾರೆ. ಆದರೆ ಇವೆರಡರ ನಡುವೆ ವ್ಯತ್ಯಾಸವಿದೆ. ಜನನ ದರ ಎಂದರೆ ಒಂದು ವರ್ಷದಲ್ಲಿ ಪ್ರತಿ ಸಾವಿರ ಜನರಿಗೆ ಜನಿಸುವ ಮಕ್ಕಳ ಸಂಖ್ಯೆಯಾಗಿದೆ. ಆದರೆ ಸಂತಾನೋತ್ಪತ್ತಿ ದರ ಎಂದರೆ ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಪಡೆಯಬಹುದಾದ ಸರಾಸರಿ ಮಕ್ಕಳ ಸಂಖ್ಯೆಯನ್ನು ಸೂಚಿಸುತ್ತದೆ. ಈ ಸಂತಾನೋತ್ಪತ್ತಿ ದರ ಸತತವಾಗಿ ಇಳಿಕೆಯಾಗುತ್ತಿರುವುದರಿಂದಲೇ, ದೇಶದಲ್ಲಿ ಒಟ್ಟಾರೆ ಜನನ ದರ ಕಡಿಮೆಯಾಗುತ್ತಿದ್ದು, ಭಾರತದ ಜನಸಂಖ್ಯೆ ಇಳಿಕೆ ಹಂತಕ್ಕೆ ತಲುಪುತ್ತಿದೆ.