Search


ಸುಧಾಕರ್ ತಾಯಿಗೆ ಗೌರವ ಸಲ್ಲಿಸಿದ ಪ್ರದೀಪ್ ಈಶ್ವರ್; ಓಪಿಡಿ ಬ್ಲಾಕ್‌ಗೆ ಹೆಸರು ಇಡಲು ಮನವಿ

ಚಿಕ್ಕಬಳ್ಳಾಪುರ: ರಾಜಕೀಯವಾಗಿ ಪರಸ್ಪರ ವಿರೋಧಿಗಳೆಂದು ಗುರುತಿಸಿಕೊಂಡಿರುವ ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಂಸದ ಡಾ. ಕೆ. ಸುಧಾಕರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು, ಈ ವೇಳೆ ಪ್ರದೀಪ್ ಈಶ್ವರ್ ಮಾಡಿರುವ ಮನವಿ ಗಮನ ಸೆಳೆದಿದೆ.

ಚಿಕ್ಕಬಳ್ಳಾಪುರ ನಗರದ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ನಡೆದ ವಿಶೇಷಚೇತನರು ಹಾಗೂ ಹಿರಿಯ ನಾಗರಿಕರಿಗೆ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಅರೂರು ಬಳಿ ಇರುವ ನಂದಿ ಮೆಡಿಕಲ್ ಕಾಲೇಜಿನ ಓಪಿಡಿ ಬ್ಲಾಕ್‌ಗೆ ಸಂಸದ ಡಾ. ಕೆ. ಸುಧಾಕರ್ ಅವರ ತಾಯಿ ಶಾಂತಮ್ಮ ಅವರ ಹೆಸರಿಡುವಂತೆ ಮನವಿ ಮಾಡಿದರು.

‘ಶಾಂತಮ್ಮ ಅವರು ನನಗೂ ತಾಯಿಯಿದ್ದಂತೆ. ನಂದಿ ಮೆಡಿಕಲ್ ಕಾಲೇಜಿನ ಓಪಿಡಿ ಬ್ಲಾಕ್‌ಗೆ ಅವರ ಹೆಸರಿಡಬೇಕು. ಈ ಕುರಿತು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡು ಅನುಮತಿ ನೀಡಿಸಬೇಕು’ ಎಂದು ಪ್ರದೀಪ್ ಈಶ್ವರ್ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಸಚಿವ ಭೈರತಿ ಸುರೇಶ್ ಹಾಗೂ ಸಂಸದ ಕೆ. ಸುಧಾಕರ್ ಉಪಸ್ಥಿತರಿದ್ದ ಸಂದರ್ಭದಲ್ಲೇ ಶಾಸಕ ಪ್ರದೀಪ್ ಈಶ್ವರ್ ಈ ಮನವಿ ಮಾಡಿರುವುದು ವಿಶೇಷವಾಗಿತ್ತು.

ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಸಮೀಪದ ನಂದಿ ಮೆಡಿಕಲ್ ಕಾಲೇಜಿನ ಓಪಿಡಿ ಬ್ಲಾಕ್ ಉದ್ಘಾಟನಾ ಕಾರ್ಯಕ್ರಮವೂ ಇದೇ ಸಂದರ್ಭದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು. ಇನ್ನು ರಾಜಕೀಯವಾಗಿ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದ ಪ್ರದೀಪ್ ಈಶ್ವರ್ ಹಾಗೂ ಕೆ. ಸುಧಾಕರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು.

By Ravikumar - 18-09-2026


Ads in Post