Search


ಪ್ರಕಾಶ್ ರಾಜ್ ಮತದಾರರ ಪಟ್ಟಿ ವಿವಾದ: ಹೆಸರು ಡಿಲೀಟ್ ಆಗಿಲ್ಲ, ‘ಶಿಫ್ಟೆಡ್’ ಎಂದು ಸ್ಪಷ್ಟನೆ

ಬೆಂಗಳೂರು: ನಟ ಪ್ರಕಾಶ್ ರಾಜ್ ಅವರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂಬ ಆರೋಪಕ್ಕೆ ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ ಸ್ಪಷ್ಟನೆ ನೀಡಿದೆ. ಪ್ರಕಾಶ್ ರಾಜ್ ಅವರ ಹೆಸರು ಮತದಾರರ ಪಟ್ಟಿಯಿಂದ ಅಳಿಸಲಾಗಿಲ್ಲ. ಅವರು ಈ ಹಿಂದೆ ನೋಂದಾಯಿಸಿಕೊಂಡಿದ್ದ ವಿಳಾಸದಿಂದ ಸ್ಥಳಾಂತರಗೊಂಡಿರುವ ಹಿನ್ನೆಲೆಯಲ್ಲಿ ‘Shifted’ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ 16, 2026ರಂದು SIR ಪ್ರಕ್ರಿಯೆಗಾಗಿ ಮತದಾರರ ಪಟ್ಟಿಯ ಡೇಟಾ ಫ್ರೀಜ್ ಮಾಡಿದಾಗ, ಶಾಂತಿನಗರ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 1ರಲ್ಲಿ 970ನೇ ಕ್ರಮಾಂಕದಲ್ಲಿ ಪ್ರಕಾಶ್ ರಾಜ್ ಅವರ ಹೆಸರು ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಬೂತ್ ಲೆವೆಲ್ ಅಧಿಕಾರಿ (BLO) ಮನೆ-ಮನೆ ಪರಿಶೀಲನೆ ನಡೆಸಿದ ವೇಳೆ, ಪ್ರಕಾಶ್ ರಾಜ್ ಅವರು ಈ ಹಿಂದೆ ನೋಂದಾಯಿಸಿಕೊಂಡಿದ್ದ ಗಾರ್ಡನ್ ಅಪಾರ್ಟ್‌ಮೆಂಟ್‌ನ ವಿಳಾಸದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿಲ್ಲ ಎಂಬುದು ಪತ್ತೆಯಾಗಿದೆ. ನೆರೆಹೊರೆಯವರು, ಅಪಾರ್ಟ್‌ಮೆಂಟ್ ಮ್ಯಾನೇಜರ್ ಹಾಗೂ ಮನೆಯ ಮಾಲೀಕರಿಂದಲೂ ಈ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಕಾಶ್ ರಾಜ್ ಅವರು ಶಾಂತಿನಗರ ಕ್ಷೇತ್ರದ ವ್ಯಾಪ್ತಿಯಲ್ಲೇ ಮತ್ತೊಂದು ವಿಳಾಸದಲ್ಲಿ ವಾಸಿಸುತ್ತಿರುವುದನ್ನು ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಹೊಸ ವಿಳಾಸಕ್ಕೆ ಮತದಾರರ ವಿವರಗಳನ್ನು ಬದಲಾಯಿಸಲು ಅವರು Form 6 ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದ ಪ್ರಕಾಶ್ ರಾಜ್, SIR ಪ್ರಕ್ರಿಯೆಯಲ್ಲಿ ತಮ್ಮ ಹೆಸರು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿದ್ದರು. ಈ ಕ್ರಮದ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಇದೀಗ ಚುನಾವಣಾ ಅಧಿಕಾರಿಗಳ ಸ್ಪಷ್ಟನೆಯಿಂದಾಗಿ, ಹೆಸರು ಸಂಪೂರ್ಣವಾಗಿ ಡಿಲೀಟ್ ಮಾಡಿರುವುದಕ್ಕಿಂತ ಹಳೆಯ ವಿಳಾಸದ ದಾಖಲೆಯನ್ನು ‘Shifted’ ಎಂದು ಬದಲಾಯಿಸಿರುವುದು ಬೆಳಕಿಗೆ ಬಂದಿದೆ. ಈ ಬೆಳವಣಿಗೆ ರಾಜ್ಯದಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆ ಹಾಗೂ ಮತದಾರರ ಪಟ್ಟಿಯಲ್ಲಿನ ಹೆಸರುಗಳ ಪರಿಷ್ಕರಣೆ ಕುರಿತು ಮತ್ತೊಮ್ಮೆ ರಾಜಕೀಯ ಚರ್ಚೆಗೆ ಕಾರಣವಾಗಿದೆ.

By Ravikumar - 12-08-2026


Ads in Post