ಮೈಸೂರು: ಮೈಸೂರು ದಸರಾ ಸಂಭ್ರಮದ ನಡುವೆಯೇ ಕೆ.ಆರ್. ನಗರದ ಎಡತೊರೆ ಗ್ರಾಮದಲ್ಲಿರುವ ಐತಿಹಾಸಿಕ ಅರ್ಕೇಶ್ವರ ದೇಗುಲದ ಆವರಣದ ಗೋಡೆಯ ಮೇಲೆ ಶಿಲುಬೆ ಹಾಗೂ ಮಸೀದಿಯ ಚಿತ್ರಗಳು ಪತ್ತೆಯಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ದೇವಸ್ಥಾನದ ಗೋಡೆಯ ಮೇಲೆ ಹಸಿರು ಬಣ್ಣದಲ್ಲಿ ಮಸೀದಿಯ ಚಿತ್ರ ಹಾಗೂ ಕೆಂಪು ಬಣ್ಣದಲ್ಲಿ ಶಿಲುಬೆಯನ್ನು ಬಿಡಿಸಲಾಗಿದ್ದು, ಈ ಬೆಳವಣಿಗೆ ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ದೇವಾಲಯದ ನವೀಕರಣ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಈ ಚಿತ್ರಗಳನ್ನು ಬಿಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇವಸ್ಥಾನದ ಗೋಡೆಯ ಮೇಲಿನ ಚಿತ್ರಗಳನ್ನು ತಕ್ಷಣವೇ ತೆಗೆದುಹಾಕುವಂತೆ ಆಗ್ರಹಿಸಿರುವ ಅವರು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದೇ ವೇಳೆ, ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ, ಮುಸ್ಲಿಮರನ್ನು ದೂಷಿಸಬಾರದು ಎಂದು ಹೇಳಿದ್ದಾರೆ. “ಇದಕ್ಕೆ ಬೆರಕೆ ಹಿಂದೂಗಳೇ ಕಾರಣ” ಎಂದು ಆರೋಪಿಸಿರುವ ಅವರು, ದೇವಸ್ಥಾನದ ಗೋಡೆಯ ಮೇಲೆ ಇಂತಹ ಚಿತ್ರಗಳನ್ನು ಬಿಡಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ತಹಶೀಲ್ದಾರ್ ಸುರೇಂದ್ರ ಮೂರ್ತಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಸ್ಥಾನದ ಗೋಡೆಯ ಮೇಲೆ ಶಿಲುಬೆ ಮತ್ತು ಮಸೀದಿಯ ಚಿತ್ರಗಳನ್ನು ಬಿಡಿಸಿರುವುದು ಪರಿಶೀಲನೆ ವೇಳೆ ಕಂಡುಬಂದಿದೆ. ಈ ಸಂಬಂಧ ದೇವಾಲಯದ ಪಾರುಪತ್ತೇದಾರ ಆರತಿ ಹಾಗೂ ಆರ್ಟಿಸ್ಟ್ ವಿನಯ್ ವಿರುದ್ಧ ದೂರು ದಾಖಲಿಸಲಾಗಿದ್ದು, ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ.