Search


ಪ್ರದೀಪ್ ಈಶ್ವರ್ ವಿರುದ್ಧ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ: ‘ಮೆಡಿಕಲ್ ಕಾಲೇಜು ಬದಲು ಹುಚ್ಚಾಸ್ಪತ್ರೆ ಕೇಳುತ್ತಿದ್ದೆ’

ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು “ಮುಟ್ಟಾಳ, ನಾಲಾಯಕ್, ನಾಮರ್ದ” ಎಂದು ಟೀಕಿಸಿದ್ದಕ್ಕೆ ಪ್ರತಾಪ್ ಸಿಂಹ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರದೀಪ್ ಈಶ್ವರ್ ಹೇಳಿಕೆಗಳ ಕುರಿತು ಮಾಧ್ಯಮಗಳು ಪದೇಪದೇ ಪ್ರಶ್ನಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ತಮ್ಮ ವಿರುದ್ಧ ಈ ರೀತಿಯ ಪದಗಳನ್ನು ಬಳಸಬಾರದು ಎಂದು ಕೋರ್ಟ್ ಹೇಳಿದ್ದರೂ, ಮಾಧ್ಯಮಗಳು ಅವರ ಬಳಿ ಮೈಕ್ ಹಿಡಿದುಕೊಂಡು ಹೋಗುತ್ತಿವೆ ಎಂದು ಆರೋಪಿಸಿದರು. ಸಮಾಜದಲ್ಲಿರುವ ವಿಚಾರವಂತರು ಹಾಗೂ ಸಜ್ಜನರ ಬಗ್ಗೆ ಪ್ರಶ್ನಿಸಿದರೆ ಮಾತ್ರ ತಾವು ಉತ್ತರಿಸುವುದಾಗಿ ಪ್ರತಾಪ್ ಸಿಂಹ ಹೇಳಿದರು. “ಟೀಕೆ, ತರ್ಕ ಇವೆಲ್ಲವೂ ಇರುತ್ತವೆ. ಆದರೆ ಯಾರೋ ಮೆಂಟರ್ ಗಿರಾಕಿ ಬಗ್ಗೆ ಕೇಳುತ್ತೀರಿ” ಎಂದು ವ್ಯಂಗ್ಯವಾಡಿದ ಅವರು, ಪ್ರದೀಪ್ ಈಶ್ವರ್ ಅವರ ಬಗ್ಗೆ ಮೊದಲೇ ತಿಳಿದಿದ್ದರೆ ಮಾಜಿ ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ತೆಗೆದುಕೊಂಡು ಹೋಗುವ ಬದಲು ಹುಚ್ಚಾಸ್ಪತ್ರೆ ತೆಗೆದುಕೊಂಡು ಹೋಗುವಂತೆ ಹೇಳುತ್ತಿದ್ದೆ ಎಂದು ತಿರುಗೇಟು ನೀಡಿದರು.

ನಾಲಿಗೆ ಹರಿಬಿಟ್ಟಿದ್ದ ಶಾಸಕ ಪ್ರದೀಪ್ ಈಶ್ವರ್

ಇದಕ್ಕೂ ಮುನ್ನ ಪ್ರತಾಪ್ ಸಿಂಹ ವಿರುದ್ಧ ಪ್ರದೀಪ್ ಈಶ್ವರ್ ತೀವ್ರ ವಾಗ್ದಾಳಿ ನಡೆಸಿದ್ದರು. “ನೀನು ದಲಿತರ ನೀಲಿ ಶಾಲಿನ ಬಗ್ಗೆ ಮಾತನಾಡುವ ಬದಲು ಕೇಸರಿ ಶಾಲಿನ ಬಗ್ಗೆ ಮಾತನಾಡು. ನೀನು ಒಂದು ಕೇಸರಿ ಶಾಲು ಹಾಕಿಕೊಂಡು ಬಾ, ನಾವು ಸಾವಿರ ನೀಲಿ ಶಾಲು ಹಾಕಿಕೊಂಡು ಬರುತ್ತೇವೆ” ಎಂದು ಸವಾಲಿನ ಧಾಟಿಯಲ್ಲಿ ಹೇಳಿದ್ದರು. ಅಲ್ಲದೆ, ಸರ್ಕಲ್ ಇನ್ಸ್‌ಪೆಕ್ಟರ್‌ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

ಮಸೀದಿ ಮುಂದೆ ನಿಂತು ತಮ್ಮ ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ಪ್ರತಾಪ್ ಸಿಂಹ ಅವರಿಗೆ ಪ್ರದೀಪ್ ಈಶ್ವರ್ ಎಚ್ಚರಿಕೆ ನೀಡಿದ್ದರು. ಇಸ್ಲಾಂ ಧರ್ಮದವರು ದೇಶದಲ್ಲಿ ಹೊಂದಿಕೊಂಡು ಬದುಕುತ್ತಿದ್ದಾರೆ ಎಂದು ಹೇಳಿದ ಅವರು, ಪ್ರತಾಪ್ ಸಿಂಹ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಈ ಹೇಳಿಕೆಗಳಿಗೆ ಇದೀಗ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದು, ಇಬ್ಬರು ನಾಯಕರ ನಡುವಿನ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ.

By Ravikumar - 24-09-2026


Ads in Post