Search


ತಮಿಳುನಾಡು ಸಿಎಂ ವಿಜಯ್ ವಿಚ್ಛೇದನ ಪ್ರಕರಣ ಆಗಸ್ಟ್ 7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್

ತಮಿಳುನಾಡು ಮುಖ್ಯಮಂತ್ರಿ, ಖ್ಯಾತ ನಟ ದಳಪತಿ ವಿಜಯ್  ಮತ್ತು ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ನಡುವಿನ ವಿಚ್ಛೇದನ   ಪ್ರಕರಣದ ವಿಚಾರಣೆಯನ್ನು ಚೆಂಗಲ್ಪಟ್ಟು ಮಹಿಳಾ ನ್ಯಾಯಾಲಯವು ಆಗಸ್ಟ್ 7ಕ್ಕೆ ಮುಂದೂಡಿದೆ. ಜೂನ್ 15ರ ಸೋಮವಾರದಂದು ನಡೆದ ವಿಚಾರಣೆಗೆ ಕೋರ್ಟ್ ಸೂಚನೆಯಂತೆ ವಿಜಯ್ ಮತ್ತು ಸಂಗೀತಾ ಖುದ್ದಾಗಿ ಹಾಜರಾಗಿದ್ದರು. ಬೆಳಿಗ್ಗೆ 10.30ರ ಸುಮಾರಿಗೆ ಆರಂಭವಾದ ವಿಚಾರಣೆಯಲ್ಲಿ ದಂಪತಿ ಉಪಸ್ಥಿತರಿದ್ದರಾದರೂ, ಯಾವುದೇ ಪ್ರಮುಖ ನಿರ್ಧಾರ ಅಥವಾ ಸಂಧಾನ ಸೂತ್ರಗಳು ಮೂಡಿಬರದೆ ಸೆಷನ್ ಮುಕ್ತಾಯಗೊಂಡಿತು. ತಮ್ಮ 27 ವರ್ಷಗಳ ದಾಂಪತ್ಯ ಜೀವನಕ್ಕೆ ಅಧಿಕೃತವಾಗಿ ತೆರೆ ಎಳೆಯಲು ಸಂಗೀತಾ ಅವರು ವಿಚ್ಛೇದನ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ವಿಜಯ್ ಮತ್ತು ಸಂಗೀತಾ 1998ರಲ್ಲಿ ಯುಕೆನಲ್ಲಿ ಕಾನೂನುಬದ್ಧವಾಗಿ ವಿವಾಹ ನೋಂದಣಿ ಮಾಡಿಕೊಂಡಿದ್ದರು. ನಂತರ 1999ರಲ್ಲಿ ಚೆನ್ನೈನಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾಗಿದ್ದರು. ಆದರೆ ಈಗ ‘1954ರ ವಿಶೇಷ ವಿವಾಹ ಕಾಯ್ದೆ’ಯಡಿ ಸಂಗೀತಾ ಅವರು ವಿಜಯ್ ವಿರುದ್ಧ ವಿವಾಹೇತರ ಸಂಬಂಧ ಮತ್ತು ಮಾನಸಿಕ ಕ್ರೌರ್ಯದ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ.

ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ, 2021ರ ಏಪ್ರಿಲ್‌ನಲ್ಲಿ ವಿಜಯ್ ಅವರು ಸಹ ನಟಿಯೊಬ್ಬರ ಜೊತೆ ಸಂಬಂಧ ಹೊಂದಿರುವುದು ಸಂಗೀತಾ ಅವರಿಗೆ ತಿಳಿದುಬಂದಿತ್ತು. ಅರ್ಜಿಯಲ್ಲಿ ನಟಿಯ ಹೆಸರನ್ನು ಬಹಿರಂಗಪಡಿಸದಿದ್ದರೂ, ಚಿತ್ರರಂಗ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ತ್ರಿಶಾ ಕೃಷ್ಣನ್ ಜೊತೆ ವಿಜಯ್ ಹೆಸರು ವ್ಯಾಪಕವಾಗಿ ಕೇಳಿಬರುತ್ತಿದೆ. ಆ ಸಂಬಂಧವನ್ನು ಕೊನೆಗೊಳಿಸುವುದಾಗಿ ವಿಜಯ್ ಭರವಸೆ ನೀಡಿದ್ದರಾದರೂ, ಅದನ್ನು ಮುಂದುವರಿಸಿದ್ದರು ಎಂದು ಸಂಗೀತಾ ಆರೋಪಿಸಿದ್ದಾರೆ. ಅಲ್ಲದೆ, ಆ ನಟಿ ಸೋಷಿಯಲ್ ಮೀಡಿಯಾದಲ್ಲಿ ಇಬ್ಬರೂ ಜೊತೆಯಾಗಿ ಇರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾಗ ವಿಜಯ್ ಯಾವುದೇ ಆಕ್ಷೇಪ ಎತ್ತುತ್ತಿರಲಿಲ್ಲ. ಇದು ತಮಗೆ ಮತ್ತು ತಮ್ಮ ಮಕ್ಕಳಿಗೆ ತೀವ್ರ ಮುಜುಗರ ಹಾಗೂ ಮಾನಸಿಕ ಹಿಂಸೆ ನೀಡಿದೆ ಎಂದು ಸಂಗೀತಾ ಅರ್ಜಿಯಲ್ಲಿ ದೂರಿದ್ದಾರೆ.

2024ರ ಆಗಸ್ಟ್‌ನಿಂದ 2025ರ ಫೆಬ್ರವರಿ ನಡುವೆ ಲೀಗಲ್ ನೋಟಿಸ್‌ಗಳು ಮತ್ತು ವೈಯಕ್ತಿಕ ಮಾತುಕತೆಗಳ ಮೂಲಕ ಸಂಬಂಧವನ್ನು ಸರಿಪಡಿಸಲು ಸಂಗೀತಾ ಪ್ರಯತ್ನಿಸಿದ್ದರು. ಆದರೆ 2025ರ ನವೆಂಬರ್ 9ರಂದು ನಡೆದ ಕೊನೆಯ ಭೇಟಿಯೂ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ಇಬ್ಬರ ನಡುವಿನ ದಾಂಪತ್ಯ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದ್ದು, ಕೇವಲ ಕಾಗದದ ಮೇಲಷ್ಟೇ ಉಳಿದಿದೆ ಎಂದು ಅವರು ಕೋರ್ಟ್‌ಗೆ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಏಪ್ರಿಲ್ 20ರಂದು ನಡೆದಿದ್ದ ಮೊದಲ ವಿಚಾರಣೆಗೆ ವಿಜಯ್ ಮತ್ತು ಸಂಗೀತಾ ಇಬ್ಬರೂ ಗೈರಾಗಿದ್ದರು. ಕೇವಲ ಅವರ ಪರ ವಕೀಲರು ಮಾತ್ರ ಹಾಜರಾಗಿದ್ದರು. ಸೆಲೆಬ್ರಿಟಿಗಳಾಗಿರುವುದರಿಂದ ಭದ್ರತೆ ಸಮಸ್ಯೆಗಳನ್ನು ಉಲ್ಲೇಖಿಸಿ ಆನ್‌ಲೈನ್ ಮೂಲಕ ಹಾಜರಾಗಲು ಇಬ್ಬರ ಪರ ವಕೀಲರು ಅನುಮತಿ ಕೋರಿದ್ದರು. ಆದರೆ ನ್ಯಾಯಾಲಯವು ಈ ಮನವಿಯನ್ನು ತಿರಸ್ಕರಿಸಿ, ಜೂನ್ 15ರ ವಿಚಾರಣೆಗೆ ಇಬ್ಬರೂ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಿರಬೇಕು ಎಂದು ಖಡಕ್ ಆದೇಶ ನೀಡಿತ್ತು. ಅದರಂತೆ ಸೋಮವಾರ ಇಬ್ಬರೂ ಕೋರ್ಟ್‌ಗೆ ಬಂದಿದ್ದರು. ಮುಂದಿನ ವಿಚಾರಣೆ ಆಗಸ್ಟ್ 7ರಂದು ನಡೆಯಲಿದೆ.

By thebigbulletin.com - 15-06-2026


Ads in Post