ಬೆಂಗಳೂರು: ನೈಸ್ (NICE) ರಸ್ತೆ ಯೋಜನೆಗಾಗಿ ತಮ್ಮ ಜಮೀನು ಬಿಟ್ಟುಕೊಟ್ಟ ರೈತರಿಗೆ ಸೂಕ್ತ ನಿವೇಶನಗಳನ್ನು ಹಂಚಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆದಿದ್ದು, ಬಾಕಿ ಇರುವ ಎಲ್ಲ ಅರ್ಹ ರೈತರಿಗೆ ಮುಂದಿನ ಎರಡು ತಿಂಗಳೊಳಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ನೈಸ್ ಸಂಸ್ಥೆಗೆ ಸರ್ಕಾರ ಕಟ್ಟುನಿಟ್ಟಿನ ಗಡುವು ವಿಧಿಸಿದೆ.
ಜಮೀನು ನೀಡಿದ ರೈತರಿಗೆ ಅವರ ಜಮೀನಿನ ಪ್ರಮಾಣದ ಆಧಾರದ ಮೇಲೆ ನಿವೇಶನ ನೀಡಲು ನಿರ್ಧರಿಸಲಾಗಿದೆ. ಒಂದು ಎಕರೆಗಿಂತ ಕಡಿಮೆ ಜಮೀನು ನೀಡಿದವರಿಗೆ 30x40 ಅಡಿ ನಿವೇಶನ ಹಾಗೂ ಒಂದು ಎಕರೆಗಿಂತ ಹೆಚ್ಚು ಜಮೀನು ನೀಡಿದವರಿಗೆ 60x40 ಅಡಿ ನಿವೇಶನ ನೀಡುವ ಕುರಿತು ಸರ್ಕಾರ ಕ್ರಮ ಕೈಗೊಂಡಿದೆ.
ಒಟ್ಟು 1,453 ರೈತರಿಗೆ ನಿವೇಶನ ನೀಡಬೇಕಿದ್ದು, ಇದುವರೆಗೆ ನೈಸ್ ಸಂಸ್ಥೆ ಕೇವಲ 540 ನಿವೇಶನಗಳನ್ನು ಮಾತ್ರ ಹಂಚಿಕೆ ಮಾಡಿದೆ. ಇನ್ನೂ ನೂರಾರು ಫಲಾನುಭವಿಗಳು ನಿವೇಶನಕ್ಕಾಗಿ ಕಾಯುತ್ತಿದ್ದಾರೆ. ನೈಸ್ ಸಂಸ್ಥೆಯ ವಶದಲ್ಲಿರುವ ಜಮೀನಿನಲ್ಲಿ ಎಲ್ಲಿ ಭೂಮಿ ಲಭ್ಯವಿದೆಯೋ, ಅಲ್ಲಿಯೇ ಅರ್ಹ ರೈತರಿಗೆ ನಿವೇಶನ ನೀಡಬೇಕು ಎಂದು ಡಿಸಿಎಂ ಪರಮೇಶ್ವರ್ ಸೂಚಿಸಿದ್ದಾರೆ. ನೈಸ್ ರಸ್ತೆ ಯೋಜನೆಗಾಗಿ ರೈತರು ಸ್ವಯಂಪ್ರೇರಿತರಾಗಿ ತಮ್ಮ ಜಮೀನು ನೀಡಿದ್ದ ಸಂದರ್ಭದಲ್ಲಿ, ಅವರಿಗೆ ನಿವೇಶನ ಹಂಚಿಕೆ ಮಾಡುವುದಾಗಿ ಜಿಲ್ಲಾಧಿಕಾರಿಗಳು ಹಾಗೂ ನೈಸ್ ಕಂಪನಿ ಒಪ್ಪಿಕೊಂಡಿದ್ದವು. ಆದರೆ ನಂತರದ ಅಂತಿಮ ಒಪ್ಪಂದದಲ್ಲಿ ನಿವೇಶನ ನೀಡುವ ಷರತ್ತನ್ನು ಸೇರಿಸಲಾಗಿರಲಿಲ್ಲ.
ಈ ಲೋಪವನ್ನು ಸರಿಪಡಿಸಿ, ಜಮೀನು ಕಳೆದುಕೊಂಡ ರೈತರಿಗೆ ನ್ಯಾಯ ಒದಗಿಸುವ ಉದ್ದೇಶದಿಂದ ಸರ್ಕಾರ ಇದೀಗ ಎರಡು ತಿಂಗಳ ಗಡುವು ನಿಗದಿಪಡಿಸಿದೆ. ಇದೇ ವೇಳೆ, ಸಚಿವ ಸಂಪುಟ ಸಭೆಯಲ್ಲಿ ನೈಸ್ ರಸ್ತೆಯ ಟೋಲ್ ದರ ಅಥವಾ ನಿಯಮಗಳ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಆದರೆ ನೈಸ್ ಯೋಜನೆಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ 21ರಿಂದ 3 ದಿನ ವಿಶೇಷ ಅಧಿವೇಶನ
ಇದೇ ಸಂಪುಟ ಸಭೆಯಲ್ಲಿ ಸೆಪ್ಟೆಂಬರ್ 21ರಿಂದ 23ರವರೆಗೆ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಲು ತೀರ್ಮಾನಿಸಲಾಗಿದೆ. ಈ ವಿಶೇಷ ಅಧಿವೇಶನದಲ್ಲಿ ಪ್ರಮುಖವಾಗಿ ಕಸ್ತೂರಿರಂಗನ್ ವರದಿ ಜಾರಿ ವಿಚಾರ ಹಾಗೂ ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಸಮಗ್ರ ಚರ್ಚೆ ನಡೆಸುವ ಸಾಧ್ಯತೆ ಇದೆ.