Search


ಮೂತ್ರ ಕುಡಿಸಿ ಮಹಿಳೆ ಮೇಲೆ ಅತ್ಯಾಚಾರ: ಸ್ವಾಮಿಗೆ ಸಾಥ್‌ ಕೊಟ್ಟ ಗಂಡ

ಪುಣೆ : ಮಾಟ-ಮಂತ್ರದ ಹೆಸರಿನಲ್ಲಿ ದೇವಮಾನವನೊಬ್ಬ ಮಹಿಳೆಗೆ ವರ್ಷಗಳ ಕಾಲ ಲೈಂಗಿಕ ಕಿರುಕುಳ ಕೊಟ್ಟಿದ್ದಲ್ಲದೆ, ಬಲವಂತವಾಗಿ ಮೂತ್ರ ಕುಡಿಸಿ ಹಿಂಸೆ ನೀಡಿರುವ ಘಟನ ಮಹರಾಷ್ಟ್ರದ ಪುಣೆಯಲ್ಲಿ ನಡೆದಿದೆ.  ಘಟನೆ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಈ ನೀಚ ಕೃತ್ಯಕ್ಕೆ ಮಹಿಳೆಯ ಪತಿ ಹಾಗೂ ಆಕೆಯ ಅತ್ತ-ಮಾವ ಕೂಡ ಸಾಥ್‌ ನೀಡಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ.

ಸಂತ್ರಸ್ತ ಮಹಿಳೆಯ ಪತಿ ಪುಣೆಯ ಪ್ರಭಾವಿ ಉದ್ಯಮಿಯಾಗಿದ್ದಾರೆ. ಅವರ ವ್ಯವಹಾರದಲ್ಲಿ ಕೆಲವು ಆರ್ಥಿಕ ನಷ್ಟಗಳು ಉಂಟಾದಾಗ, ಪರಿಚಯಸ್ಥರ ಮೂಲಕ ಈ ‘ದೇವಮಾನವ’ನ ಸಂಪರ್ಕ ಸಿಕ್ಕಿತ್ತು. ಉದ್ಯಮದಲ್ಲಿ ಭಾರಿ ಲಾಭ ತಂದುಕೊಡುವುದಾಗಿ ಹಾಗೂ ಮನೆಯಲ್ಲಿ ಐಶ್ವರ್ಯ ವೃದ್ಧಿಸುವುದಾಗಿ ನಂಬಿಸಿದ ದೇವಮಾನವ ಮಾಟ-ಮಂತ್ರ, ಪೂಜೆಯ ನೆಪದಲ್ಲಿ ಆ ಉದ್ಯಮಿಯ ಕುಟುಂಬವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದನು.

ಮಾಡರ್ನ್‌ ಗುರುಕುಲ ಹೆಸರಿನಲ್ಲಿ ಆಶ್ರಮ..!

ಈ ಅಯೋಗ್ಯ ಸ್ವಾಮಿಯನ್ನ ರಾಧಾಮೋಹನ್‌ ಮಿಶ್ರಾ ಎಂದು ಗುರುತಿಸಿದ್ದು, ಪುಣೆಯ ವಾಗೋಲಿಯ ಉಬಾಲೆ ನಗರದಲ್ಲಿ ‘ಮಾಡರ್ನ್ ಗುರುಕುಲ’ ಎಂಬ ಆಶ್ರಮವನ್ನು ನಡೆಸುತ್ತಿದ್ದನು. ಸಂತ್ರಸ್ಥ ಮಹಿಳೆಯು 2010ರಲ್ಲಿ ಈತನ ಸಂಪರ್ಕಕ್ಕೆ ಸಿಕ್ಕಿದ್ದಳು, ಇದಾದ ನಂತರ ಆಕೆಯ ಮತ್ತು ಆಕೆಯ ಕುಟುಂಬಸ್ಥರ ಬಳಿ ತನಗೆ ದೈವಿ ಶಕ್ತಿ ಇದೆ ಎಂದು ನಂಬಿಸಿ 2010 ರಿಂದ 2016ರ ನಡುವೆ ಮಹಿಳೆಗೆ ಚಿತ್ರಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಮಹಿಳೆಯನ್ನ ಲೈಂಗಿಕವಾಗಿ ಶೋಷಿಸಿದಲ್ಲದೆ , ದೈಹಿಕವಾಗಿ ಹಲ್ಲೆ ನಡೆಸಿ, ಕರೆಂಟ್‌ ಶಾಕ್‌ ಕೊಟ್ಟು ಚಿತ್ರ ಹಿಂಸೆ ನೀಡಿದ್ದಾನೆ, ಜೊತೆಗೆ ಮಹಿಳೆಯ ಅಶ್ಲೀಲ ವಿಡಿಯೋ ಮಾಡಿಕೊಂಡು ಬ್ಲಾಕ್‌ಮೇಲ್‌ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

ಇನ್ನು ಈ ಕೃತ್ಯಕ್ಕೆ ಸಂತ್ರಸ್ತೆಯ ಪತಿ ಮತ್ತು ಆಕೆಯ ಅತ್ತೆ-ಮಾವಂದಿರು ಕೂಡ ಸಾಥ್ ನೀಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತಾಂತ್ರಿಕ ವಿಧಿವಿಧಾನಗಳ ಭಾಗವೆಂದು ಹೇಳಿ, ಮಹಿಳೆಗೆ ಬಲವಂತವಾಗಿ ಈ ದೇವಮಾನವನ ಮೂತ್ರವನ್ನು ಕುಡಿಸಲಾಗಿತ್ತು. ಇದನ್ನು ವಿರೋಧಿಸಿದಾಗ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ, ಕುಟುಂಬಕ್ಕೆ ತೊಂದರೆಯಾಗಲಿದೆ ಎಂದು ಬೆದರಿಕೆ ಹಾಕಲಾಗಿತ್ತು.

ಈ ಘಟನೆಯು ಪುಣೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ವಿದ್ಯಾವಂತ ಕುಟುಂಬಗಳೂ ಇಂತಹ ಮೂಢನಂಬಿಕೆಗೆ ಬಲಿಯಾಗುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪೊಲೀಸರು ಮಿಶ್ರಾನ ಆಶ್ರಮದ ಮೇಲೆ ದಾಳಿ ನಡೆಸಿದಾಗ, ಅಲ್ಲಿನ ನೆಲದಡಿಯ ರಹಸ್ಯ ಕೋಣೆಯಿಂದ ಭಾರಿ ಪ್ರಮಾಣದ ಆಕ್ಷೇಪಾರ್ಹ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ವೇಳೆ 12 ಲ್ಯಾಪ್‌ಟಾಪ್‌ಗಳು, 11 ಮೊಬೈಲ್ ಫೋನ್‌ಗಳು, 19 ಹಾರ್ಡ್ ಡ್ರೈವ್‌ಗಳು, ಹಲವಾರು ಪೆನ್ ಡ್ರೈವ್‌ಗಳು ಮತ್ತು ಕ್ಯಾಸೆಟ್‌ಗಳು, 6.5 ಲಕ್ಷ ರೂ. ನಗದು ಮತ್ತು 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸಿಕ್ಕಿದೆ.
 

By Ravikumar - 19-06-2026


Ads in Post