ಬೆಂಗಳೂರು: ವಿಧಾನ ಪರಿಷತ್ನ 7 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ 5 ಮತ್ತು 2 ಸ್ಥಾನಗಳಲ್ಲಿ ವಿಪಕ್ಷ ಬಿಜೆಪಿ ಗೆಲುವು ದಾಖಲಿಸಿದೆ. ಈ ಚುನಾವಣೆಯಲ್ಲಿ ಬಿಜೆಪಿಯ 3 ಶಾಸಕರು ಅಡ್ಡ ಮತದಾನ ಮಾಡಿದ್ದಾರೆ ಎನ್ನಲಾಗಿದ್ದು, ಅವರ ವಿರುದ್ದ ವಿಪಕ್ಷ ನಾಯಕ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷಕ್ಕೆ ದ್ರೋಹ ಬಗೆದವರು ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಪರಿಷತ್ ಚುನಾವಣೆಯಲ್ಲಿ ಸಂಖ್ಯಾಬಲ ಇಲ್ಲದಿದ್ದರು ಓರ್ವ ಹೆಚ್ಚುವರಿ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಿತ್ತು, ಅತ್ತ ಇದಕ್ಕೆ ಪ್ರತ್ಯುತ್ತರ ಎಂಬ ಜೆಡಿಎಸ್ ಕೂಡ ಕೇವಲ 18 ಮತಗಳಿದ್ದರು ಓರ್ವ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಿತ್ತು. ಈ ಮೂಲಕ ಚುನಾವಣೆಯಲ್ಲಿ ಅಡ್ಡ ಮತದಾನ ನಡೆಯುವುದು ಖಚಿತವಾಗಿತ್ತು, ಆದರೆ ಯಾವ ಪಕ್ಷದಿಂದ ಕ್ರಾಸ್ ವೋಟಿಂಗ್ ಆಗುತ್ತದೆ ಎಂಬುದು ರಾಜಕೀಯ ಪರಿಣಿತರ ಕುತೂಹಲಕ್ಕೆ ಕಾರಣವಾಗಿತ್ತು.
ಕಡೆಗೂ ಈ ಚುನಾವಣೆಯಲ್ಲಿ ಅಡ್ಡ ಮತದಾನವಾಗಿದ್ದು, ಮೈತ್ರಿ ಕೂಟದ 11 ಶಾಸಕರು ಕಾಂಗ್ರೆಸ್ಗೆ ಹೆಚ್ಚುವರಿ ಮತದಾನ ಮಾಡಿದ್ದಾರೆ. ಈ ಮೂಲಕ ಜೆಡಿಎಸ್ ಅಭ್ಯರ್ಥಿಗೆ ಸೋಲಾಗಿದೆ. ಆದರೆ ಬಿಜೆಪಿ ನಾಯಕರು ಕಡೆ ಕ್ಷಣದಲ್ಲಿ ಮಾಡಿದ ರಣತಂತ್ರದಿಂದ ದೊಡ್ಡ ಮುಖಭಂಗ ತಪ್ಪಿದಂತಾಗಿದೆ.
‘ಪಕ್ಷಕ್ಕೆ ದ್ರೋಹ ಬಗೆದವರು ಸಿಕ್ಕಿಹಾಕಿಕೊಳ್ಳುತ್ತಾರೆ’
ಇನ್ನು ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ನಮ್ಮ ಮೂರು ಮತಗಳು ಕ್ರಾಸ್ ಆಗಿದೆ ಅಂತಾ ಮಾಹಿತಿ ಬಂದಿದೆ. ಯಾವ ಶಾಸಕರು ಕ್ರಾಸ್ ವೋಟಿಂಗ್ ಮಾಡಿದ್ದಾರೆಂದು ಗೊತ್ತಾಗುತ್ತೆ. ಮುಂದೆ ಅದರ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ. ಆರ್.ರಘು ಅವರಿಗೆ ಕೊಟ್ಟಿದ್ದ ಒಂದು ಮತ ಅಸಿಂಧು ಆಗಿದೆ. ಲಿಂಗರಾಜ್ ಪಾಟೀಲ್ಗೆ ನಿಗದಿ ಮಾಡಿದ 3 ಮತಗಳು ಮಿಸ್ ಆಗಿದೆ. ನಾಲ್ಕು ಮತಗಳನ್ನು ಜೆಡಿಎಸ್ಗೆ ಕೊಟ್ಟಿದ್ದೆವು. ಪಕ್ಷಕ್ಕೆ ದ್ರೋಹ ಬಗೆದವರು ಸಿಕ್ಕಿಹಾಕಿಕೊಳ್ಳುತ್ತಾರೆ ಎಂದವರು ತಿಳಿಸಿದ್ದಾರೆ.