Search


ಮೋದಿಯವರ ವಿದೇಶಾಂಗ ನೀತಿಗೆ ರಾಹುಲ್ ಗಾಂಧಿ ವ್ಯಂಗ್ಯ; ಮೆಲೋನಿ ಹೆಸರು ಪ್ರಸ್ತಾಪಿಸಿ ತಿರುಗೇಟು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯನ್ನು ಟೀಕಿಸಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ವಿದೇಶಿ ನಾಯಕರನ್ನು ಅಪ್ಪಿಕೊಳ್ಳುವುದನ್ನೇ ವಿದೇಶಾಂಗ ನೀತಿ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್‌ನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರ ವಿದೇಶಿ ನಾಯಕರೊಂದಿಗಿನ ಆತ್ಮೀಯ ಭೇಟಿಗಳನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದರು. ಇದೇ ವೇಳೆ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರನ್ನು ಅಪ್ಪಿಕೊಂಡು ತಮ್ಮ ಮಾತಿಗೆ ಉದಾಹರಣೆ ನೀಡಿದರು. ರಾಹುಲ್ ಗಾಂಧಿ ಅಪ್ಪಿಕೊಂಡ ಬಳಿಕ ಸಂದೀಪ್ ದೀಕ್ಷಿತ್, “ನನ್ನನ್ನು ಮೆಲೋನಿ ಎಂದು ಭಾವಿಸಿ ಅಪ್ಪಿಕೊಂಡಿರಾ?” ಎಂದು ಹಾಸ್ಯಭರಿತವಾಗಿ ಪ್ರಶ್ನಿಸಿದರು. ಇದಕ್ಕೆ ರಾಹುಲ್ ಗಾಂಧಿ, “ನಾನು ಇನ್ನೂ ಆ ಹಂತ ತಲುಪಿಲ್ಲ” ಎಂದು ಪ್ರತಿಕ್ರಿಯಿಸಿದರು. ಅವರ ಮಾತಿಗೆ ಕಾರ್ಯಕ್ರಮದಲ್ಲಿದ್ದವರು ನಗೆಗಡಲಲ್ಲಿ ಮುಳುಗಿದರು.

ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಭಾರತದ ವಿದೇಶಾಂಗ ನೀತಿ, ಪಶ್ಚಿಮ ಏಷ್ಯಾದ ಸಂಘರ್ಷ ಹಾಗೂ ಚೀನಾ ವಿಚಾರಗಳ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತನ್ನ ರಾಜತಾಂತ್ರಿಕ ಪ್ರಭಾವವನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಅವರು ಟೀಕಿಸಿದರು.

ಚೀನಾ ವಿಚಾರದಲ್ಲಿಯೂ ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ, ಗಡಿ ಪ್ರದೇಶಗಳಲ್ಲಿ ಭಾರತದ ಗಸ್ತು ಸೇರಿದಂತೆ ಹಲವು ವಿಷಯಗಳ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು. ಪ್ರಧಾನಿ ಮೋದಿ ಅವರ ವಿದೇಶಾಂಗ ನೀತಿಯನ್ನು ಕಾಂಗ್ರೆಸ್ ನಿರಂತರವಾಗಿ ಟೀಕಿಸುತ್ತಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರ ಈ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

By Ravikumar - 13-08-2026


Ads in Post