Search


ದೇಶಕ್ಕೆ ಆರ್ಥಿಕತೆ ಕುಸಿದು ಭೀಕರ ಪರಿಸ್ಥಿತಿ ನಿರ್ಮಾಣವಾಗುತ್ತೇ; ರಾಹುಲ್‌ ಭವಿಷ್ಯ

ನವದೆಹಲಿ : ದೇಶದ ಆರ್ಥಿಕತೆ ಹದಗೆಟ್ಟಿದೆ, ಭಾರತದ ಹಿಂದೆಂದು ಕಾಣದ ಆರ್ಥಿಕ ಚಂಡಮಾರುತ ಎದುರಿಸುವ ಹಂತದಲ್ಲಿದೆ, ಕೇಂದ್ರ ಸರ್ಕಾರದ ನೀತಿಗಳು ಶ್ರೀಮಂತರನ್ನ ರಕ್ಷಿಸುತ್ತಿದ್ದು, ಸಾಮಾನ್ಯ ಜನರಿಗೆ ಅಘಾತ ನೀಡಲಿವೆ ಎಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಭವಿಷ್ಯ ನುಡಿದಿದ್ದು. ಪ್ರಧಾನಿ ನರೇಂದ್ರ ಮೋದಿಯ ವಿದೇಶಿ ಪ್ರವಾಸದ ಬಗ್ಗೆಯೂ ವ್ಯಂಗ್ಯವಾಡಿದ್ದಾರೆ.

ಉತ್ತರ ಪ್ರದೇಶದ ರಾಯ್‌ಬರೇಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ರಾಹುಲ್‌ ಗಾಂಧಿ "ಐದು ದಿನಗಳ ಅವಧಿಯಲ್ಲಿ ಕೇಂದ್ರ ಸರ್ಕಾರವು ಎರಡನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿರುವುದನ್ನು ತೀವ್ರವಾಗಿ ಖಂಡಿಸಿದರು. ಭಾರತವು ಹಿಂದೆಂದೂ ಕಾಣದ ದೊಡ್ಡ ಆರ್ಥಿಕ ಚಂಡಮಾರುತ ಎದುರಿಸುವ ಹಂತದಲ್ಲಿದೆ ಎಂದು ಎಚ್ಚರಿಸಿದ ರಾಗಾ. ಪ್ರಧಾನಿ ನರೇಂದ್ರ ಮೋದಿ ರೂಪಿಸಿರುವ ಆರ್ಥಿಕ ನೀತಿಗಳು ಸಂಪೂರ್ಣವಾಗಿ ಕುಸಿಯಲಿದ್ದು, ಅದರ ಭೀಕರ ಪರಿಣಾಮವನ್ನು ಸಾಮಾನ್ಯ ನಾಗರಿಕರು ಅನುಭವಿಸಬೇಕಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಜೊತೆಗೆ ಕೇಂದ್ರದ ಆರ್ಥಿಕ ನೀತಿಗಳು ಕೇವಲ ಅದಾನಿ ಮತ್ತು ಅಂಬಾನಿಯಂತಹ ಆಯ್ದ ಕೆಲವು ಕೋಟ್ಯಧಿಪತಿ ಉದ್ಯಮಿಗಳಿಗೆ ಮಾತ್ರ ಪ್ರಯೋಜನವನ್ನು ನೀಡುವಂತೆ ವ್ಯವಸ್ಥಿತವಾಗಿ ರೂಪಿಸಲ್ಪಟ್ಟಿವೆ, ಮೋದಿ ಜಿ ಬದಲಾಯಿಸಿರುವ ಈ ಆರ್ಥಿಕ ರಚನೆಯು ಹೆಚ್ಚು ದಿನ ಉಳಿಯುವುದಿಲ್ಲ, ಇದು ಸಂಪೂರ್ಣವಾಗಿ ಕುಸಿಯುವುದು ನಿಶ್ಚಿತ. ಆದರೆ, ಈ ಕುಸಿತದ ಹೊರೆ ಸಾಮಾನ್ಯ ಜನರಿಗೆ ಆಗುತ್ತದೆಯೇ ಹೊರತು ಅಂಬಾನಿಯಂಥವರಿಗಲ್ಲ” ಎಂದು ಅವರು ಹೇಳಿದ್ದಾರೆ.

ಮುಂಬರುವ ಆರ್ಥಿಕ ಆಘಾತವು ಕಾರ್ಪೊರೇಟ್ ದಿಗ್ಗಜರನ್ನಾಗಲಿ ಅಥವಾ ರಾಜಕೀಯ ನಾಯಕರನ್ನಾಗಲಿ ಮುಟ್ಟುವುದಿಲ್ಲ. ಅವರು ತಮ್ಮ ಅರಮನೆಗಳಲ್ಲಿ ಸುರಕ್ಷಿತವಾಗಿ ಇರುತ್ತಾರೆ. ಆದರೆ ಇದರ ನೇರ ಹೊಡೆತ ಬೀಳುವುದು ದೇಶದ ಯುವಕರು, ರೈತರು, ಕಾರ್ಮಿಕರು ಮತ್ತು ಸಣ್ಣ ಉದ್ಯಮಿಗಳ ಮೇಲೆ. ವಿಶೇಷವಾಗಿ ಉತ್ತರ ಪ್ರದೇಶದ ಜನತೆ ಮತ್ತು ಯುವಸಮುದಾಯ ಇದರ ಸಂಪೂರ್ಣ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ವಿಪಕ್ಷ ನಾಯಕ ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ನು ಪ್ರಧಾನಿ ಮೋದಿ ಪಂಚ ರಾಷ್ಟ್ರ ಪ್ರವಾಸದ ಬಗ್ಗೆ ಮಾತನಾಡಿದ ರಾಹುಲ್‌ ಗಾಂಧಿ " ಪ್ರಧಾನಿ ಮೋದಿ ದೇಶದ ಜನರಿಗೆ ವಿದೇಶಿ ಪ್ರವಾಸ ಕಡಿತಗೊಳಿಸುವಂತೆ ಸಲಹೆ ನೀಡುತ್ತಾರೆ, ಆದರೆ ಸ್ವತಃ ಅವರೇ ಜಗತ್ತಿನಾದ್ಯಂತ ಸುತ್ತುತ್ತಿರುತ್ತಾರೆ" ಎಂದು ರಾಹುಲ್‌ ಗಾಂಧಿ ಟೀಕಿಸಿದರು., 

By News Desk - 19-05-2026


Ads in Post