ಬೆಂಗಳೂರು : ಡಿಕೆ ಸರ್ಕಾರದ ವಿರುದ್ದ ರೆಬಲ್ ಆಗಿರುವ ಶಾಸಕ ರಾಮಲಿಂಗ ರೆಡ್ಡಿಯವರನ್ನ (Ramalinga Reddy) ಮನವೊಲಿಸಲು ಸಾಧ್ಯವಾಗದೆ ಇದ್ದರೆ, ರಾಜೀನಾಮೆಯನ್ನ ಅಂಗೀಕರಿಸಲು ರಾಹುಲ್ ಗಾಂಧಿ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಈ ಮೂಲಕ ಬಂಡೆ ಸರ್ಕಾರಕ್ಕೆ ಆರಂಭದಲ್ಲೇ ಅಪಶಕುನ ಎದುರಾಗಿದೆ. ಈ ಬಂಡಾಯ ರಾಜ್ಯ ಕಾಂಗ್ರೆಸ್ನಲ್ಲಿ ಯಾವೆಲ್ಲಾ ಗೊಂದಲಗಳಿಗೆ ಕಾರಣವಾಗುತ್ತದೆ ಎಂಬುದನ್ನ ಕಾದು ನೋಡಬೇಕಿದೆ.
ಇಂದು ಬೆಳಿಗ್ಗೆ ಕೋರಮಂಗಲದ ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಮಲಿಂಗ ರೆಡ್ಡಿ, ಮಾಧ್ಯಮಗಳ ಮುಂದೆಯೇ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದರು.
ʻಬೆಂಗಳೂರು ಅಭಿವೃದ್ಧಿʼ ಖಾತೆ ಸಿಗಲಿಲ್ಲ ಎಂಬ ಕಾರಣಕ್ಕೆ ತೀವ್ರ ಅಸಮಾಧಾನಗೊಂಡಿರುವ ರಾಮಲಿಂಗಾರೆಡ್ಡಿ (Ramalinga Reddy) ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಾದ ನಂತರ ರಾಮಲಿಂಗ ರೆಡ್ಡಿ ಯಾರ ಕೈಗೂ ಸಿಗದೆ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದು, ಯಾರ ಸಂಪರ್ಕಕ್ಕು ಸಿಕ್ಕಿಲ್ಲ.
ಇನ್ನು ರಾಮಲಿಂಗ ರೆಡ್ಡಿ ರಾಜೀನಾಮೆ ನೀಡಿರುವ ಸಮಯದಲ್ಲೇ ರಾಜ್ಯಕ್ಕೆ ರಾಹುಲ್ ಸೇರಿದಂತೆ ಕಾಂಗ್ರೆಸ್ ವರಿಷ್ಟರು ಆಗಮಿಸಿದ್ದು, ಈ ರಾಜೀನಾಮೆಯ ಕುರಿತು ವರಿಷ್ಟರು ಚರ್ಚೆ ನಡೆಸಿದ್ದಾರೆ. ಈ ಮಧ್ಯೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರು, ರಾಜ್ಯ ನಾಯಕರಿಗೆ ನೀಡಿರುವ ಒಂದು ಸಾಲಿನ ಸಂದೇಶ ಕಳವಳ ಹುಟ್ಟುಹಾಕಿದೆ.
ರಾಮಲಿಂಗ ರೆಡ್ಡಿಯವರು ತಮ್ಮ ರಾಜೀನಾಮೆ ವಿಚಾರದಲ್ಲಿ ಅಚಲವಾಗಿದ್ದು, ಇದನ್ನ ಮನಗಂಡಿರುವ ರಾಹುಲ್ " ರಾಮಲಿಂಗ ರೆಡ್ಡಿಯವರ ಮನವೊಲಿಸ ರಾಜೀನಾಮೆ ಹಿಂಪಡೆಯಲು ಯತ್ನಿಸಿ, ಒಂದು ವೇಳೆ ಒಪ್ಪದೆ ಇದ್ದರೆ ರಾಜೀನಾಮೆಯನ್ನ ಅಂಗೀಕರಿಸಿ ಎಂದು ಒನ್ ಲೈನ್ ಮೆಸೇಜ್ ಪಾಸ್ ಮಾಡಿದ್ದಾರೆ.