ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆ ಮುಂದುವರಿದ ಪರಿಣಾಮ ಕೃಷಿ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿದ್ದು, ಇದೀಗ ಅದರ ನೇರ ಪರಿಣಾಮ ತರಕಾರಿ ಬೆಲೆಗಳ ಮೇಲೂ ಬೀಳುತ್ತಿದೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಜೇಬಿಗೆ ಮತ್ತಷ್ಟು ಹೊರೆ ಬೀಳುತ್ತಿದೆ.
ರಾಜ್ಯದ ಹಲವು ಭಾಗಗಳಲ್ಲಿ ಮಳೆ ಅಭಾವದಿಂದ ಬೆಳೆಗಳು ಹಾನಿಗೊಳಗಾಗಿವೆ. ಕೆಲವೆಡೆ ಬೆಳೆಗಳು ಮಳೆ ಕೊರತೆಯಿಂದ ನಾಶವಾಗಿದ್ದರೆ, ಇನ್ನೂ ಕೆಲ ಪ್ರದೇಶಗಳಲ್ಲಿ ಸಮರ್ಪಕ ಮಳೆಯಿಲ್ಲದ ಕಾರಣ ಕೃಷಿ ಚಟುವಟಿಕೆಗಳೇ ನಡೆಯದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮವಾಗಿ ಮಾರುಕಟ್ಟೆಗೆ ತರಕಾರಿ ಪೂರೈಕೆ ಕಡಿಮೆಯಾಗಿದ್ದು, ದರ ಏರಿಕೆಗೆ ಕಾರಣವಾಗಿದೆ.
ಈರುಳ್ಳಿ, ಟೊಮೆಟೊ, ಬೀಟ್ರೂಟ್, ಸೌತೆಕಾಯಿ, ನಾಟಿ ಕ್ಯಾರೆಟ್, ಬೀನ್ಸ್, ಬೆಳ್ಳುಳ್ಳಿ, ಆಲೂಗೆಡ್ಡೆ, ನುಗ್ಗೆಕಾಯಿ ಹಾಗೂ ಮಂಗಳೂರು ಸೌತೆಕಾಯಿ ಸೇರಿದಂತೆ ಹಲವು ತರಕಾರಿಗಳ ದರ ಏರಿಕೆಯಾಗಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಸೆಪ್ಟೆಂಬರ್–ಅಕ್ಟೋಬರ್ ವೇಳೆಗೆ ಹೊಸ ಫಸಲು ಮಾರುಕಟ್ಟೆಗೆ ಬರುವುದರಿಂದ ತರಕಾರಿ ದರ ಇಳಿಕೆಯಾಗುತ್ತಿತ್ತು. ಆದರೆ ಈ ಬಾರಿ ಮಳೆ ಕೊರತೆಯಿಂದ ಪರಿಸ್ಥಿತಿ ಭಿನ್ನವಾಗಿದ್ದು, ಸೆಪ್ಟೆಂಬರ್ನಲ್ಲೇ ತರಕಾರಿ ಬೆಲೆಗಳು ಏರಿಕೆಯತ್ತ ಸಾಗಿವೆ.
ಹಾಪ್ಕಾಮ್ಸ್ಗಳಲ್ಲಿ ನಾಟಿ ಕ್ಯಾರೆಟ್ ಕೆ.ಜಿಗೆ ₹68ರಿಂದ ₹70, ಬೀಟ್ರೂಟ್ ₹50, ಬೆಳ್ಳುಳ್ಳಿ ₹300, ಟೊಮೆಟೊ ₹30, ಆಲೂಗೆಡ್ಡೆ ₹40ರಿಂದ ₹50, ನುಗ್ಗೆಕಾಯಿ ₹70 ಹಾಗೂ ಮಂಗಳೂರು ಸೌತೆಕಾಯಿ ₹64ರ ದರದಲ್ಲಿ ಮಾರಾಟವಾಗುತ್ತಿವೆ. ಈರುಳ್ಳಿ, ಬೀನ್ಸ್ ಹಾಗೂ ಸೌತೆಕಾಯಿ ದರದಲ್ಲೂ ಏರಿಕೆ ಕಂಡುಬಂದಿದೆ. ವ್ಯಾಪಾರಿಗಳ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ಉತ್ತಮ ಮಳೆಯಾಗಿ ತರಕಾರಿ ಪೂರೈಕೆ ಹೆಚ್ಚಾದರೆ ಮಾತ್ರ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಮಳೆ ಕೊರತೆ ಮುಂದುವರಿದರೆ ತರಕಾರಿ ದರ ಏರಿಕೆಯೂ ಮುಂದುವರಿಯುವ ಸಾಧ್ಯತೆಯಿದೆ.
ಇನ್ನು ಸಿಹಿ ಪ್ರಿಯರಿಗೆ ಸಕ್ಕರೆ ದರ ಕೊಂಚ ನೆಮ್ಮದಿ ನೀಡಿದರೂ, ಬೆಲ್ಲದ ಬೆಲೆ ಮಾತ್ರ ಇನ್ನೂ ಕಹಿಯಾಗಿಯೇ ಉಳಿದಿದೆ. ಸದ್ಯ ಕೆ.ಜಿ ಬೆಲ್ಲದ ದರ ₹75 ದಾಟಿದೆ. ಕಬ್ಬಿನ ಇಳುವರಿ ಕಡಿಮೆಯಾಗಿರುವುದು ಹಾಗೂ ಮಾರುಕಟ್ಟೆಗೆ ಬರುತ್ತಿರುವ ಬೆಲ್ಲದ ಪ್ರಮಾಣ ಕುಸಿದಿರುವುದು ದರ ಏರಿಕೆಗೆ ಕಾರಣ ಎನ್ಲಾಗುತ್ತಿದೆ.