Search


ರಾಜ್ಯದಲ್ಲಿ ಮಳೆ ಕೊರತೆ; ಕುಡಿಯುವ ನೀರಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ಹಣ ಮೀಸಲು

ಬೆಳಗಾವಿ : ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ 1 ಕೋಟಿ ರೂ. ಅನುದಾನ ನೀಡಲು ತೀರ್ಮಾನಿಸಲಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಬೆಳಗಾವಿಯ ಸುವರ್ಣಸೌಧದಲ್ಲಿ ಗುರುವಾರ ನಡೆದ ಬೆಳಗಾವಿ ವಿಭಾಗದ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ಎಲ್ಲಾ ಶಾಸಕರು, ಸಂಸದರು ಈ ಸಭೆಯಲ್ಲಿ ಭಾಗವಹಿಸಿದ್ದರು. ಬಸವಣ್ಣನ ನಾಡು ಬಸವಕಲ್ಯಾಣದಲ್ಲಿರುವ ಅನುಭವ ಮಂಟಪದಿಂದ ನನ್ನ ಉತ್ತರ ಕರ್ನಾಟಕ ಜಿಲ್ಲೆಗಳ ಪ್ರವಾಸ ಆರಂಭಿಸಿದ್ದೇನೆ. ಈ ಸಭೆಯಲ್ಲಿ ಅನೇಕ ವಿಚಾರವಾಗಿ ಚರ್ಚೆ ಮಾಡಲಾಗಿದೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ಸ್ವಲ್ಪ ಮಳೆಯಾಗಿದೆ. ಕೇಂದ್ರ ಸರ್ಕಾರ ದೇಶದಲ್ಲಿ ಭೀಕರ ಬರಗಾಲದ ಎಚ್ಚರಿಕೆ ರವಾನಿಸಿದ್ದು, ನಮ್ಮಲ್ಲೂ ವಾಡಿಕೆ ಮಳೆ ಆಗಿಲ್ಲ ಎಂದರು.

ಬರಗಾಲ ಪರಿಸ್ಥಿತಿಯಲ್ಲಿ ಕಲಬುರಗಿ ಹಾಗೂ ಬೆಳಗಾವಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದೇವೆ. ಸುಮಾರು 50ಕ್ಕೂ ಹೆಚ್ಚು ಶಾಸಕರು, ಸಂಸದರು ಅನೇಕ ಸಲಹೆ ನೀಡಿದ್ದಾರೆ. ಬಿತ್ತನೆ ಬೀಜ, ಗೊಬ್ಬರ ಪೂರೈಕೆಗೆ ಅಗತ್ಯ ತಯಾರಿ ಮಾಡಿಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ನಮ್ಮ ಸರ್ಕಾರ ಉಪಆಯುಕ್ತರಿಗೆ ಅನುದಾನ ನೀಡಿದೆ. ಕೇಂದ್ರ ಸರ್ಕಾರದ ಅನುದಾನಕ್ಕೆ ಕಾಯದೇ ನಮ್ಮ ಸರ್ಕಾರ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಈ ತೀರ್ಮಾನ ಮಾಡಲಾಗಿದೆ. ಸ್ಥಳೀಯ ಶಾಸಕರು ಈ ಬಗ್ಗೆ ಅಧ್ಯಯನ ಮಾಡಿ ಯೋಜನೆ ರೂಪಿಸಬೇಕು. ಮುಂದಿನ ದಿನಗಳಲ್ಲಿ ನೀರಾವರಿಗೆ ನೀರು ಲಭ್ಯವಾಗುತ್ತದೆಯೋ ಇಲ್ಲವೋ, ಕುಡಿಯುವ ನೀರಿನ ಪೂರೈಕೆಗೆ ಅಣೆಕಟ್ಟಿನಲ್ಲಿ ನೀರು ಸಂಗ್ರಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ರಸಗೊಬ್ಬರ ದಾಸ್ತಾನಿಗೆ ಅಧಿಕಾರಿಗಳಿಗೆ ಸೂಚನೆ

ರಸಗೊಬ್ಬರ ವಿಚಾರವಾಗಿ ಬೆಂಗಳೂರಿನಲ್ಲಿ ಸಭೆ ಮಾಡಲಾಗುವುದು. ಸಂಬಂಧಪಟ್ಟ ಸಚಿವರ ಜತೆ ಚರ್ಚೆ ಮಾಡುತ್ತೇನೆ. ಕೇಂದ್ರ ಸರ್ಕಾರ ಕೇವಲ 50% ಗೊಬ್ಬರ ಪೂರೈಕೆ ಮಾಡಿದ್ದು, ರಸಗೊಬ್ಬರ ದಾಸ್ತಾನಿಗೆ ಸೂಚಿಸಲಾಗಿದೆ. ಕುಡಿಯುವ ನೀರು ಹಾಗೂ ನೀರಾವರಿ ಯೋಜನೆಗಳಿಗೆ ಅರಣ್ಯ ಇಲಾಖೆಯಿಂದ ಅಡ್ಡಿಯಾಗುತ್ತಿದೆ ಎಂಬ ಅಹವಾಲು ಕೇಳಿಬಂದವು. 60ಕ್ಕೂ ಹೆಚ್ಚು ಜಾಗಗಳಲ್ಲಿ ಪೈಪ್‌ಲೈನ್ ಎಳೆಯಲು ಸಮಸ್ಯೆಯಾಗಿದೆ ಎಂದು ತಿಳಿದು ಬಂದಿದ್ದು, ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಪೂರೈಕೆಗೆ ತೊಂದರೆ ನೀಡಬಾರದು ಎಂದು ಸೂಚಿಸಿದ್ದೇನೆ ಎಂದು ಮಾಹಿತಿ ನೀಡಿದರು.

ಅರಣ್ಯ ಹಕ್ಕು ವಿಚಾರವಾಗಿ ಯಾರನ್ನೂ ಒಕ್ಕಲೆಬ್ಬಿಸಬಾರದು. ಕಾನೂನು ಚೌಕಟ್ಟಿನಲ್ಲಿ, ಅವರಿಗೆ ಸಿಗಬೇಕಾದ ಹಕ್ಕು ನೀಡಬೇಕು. ತಲತಲಾಂತರದಿಂದ ಅರಣ್ಯ ಪ್ರದೇಶದಲ್ಲಿ ವಾಸ ಮಾಡಿರುವವರನ್ನು ರಕ್ಷಣೆ ಮಾಡುವುದು ನಮ್ಮ ಸಂಕಲ್ಪ ಎಂದು ತಿಳಿಸಿದರು

By Ravikumar - 10-07-2026


Ads in Post