Search


ಸ್ಪೈ ಕ್ಯಾಮರಾದಿಂದ ಬಯಲಾಯ್ತು ರಾಮ ಮಂದಿರ ಕಳ್ಳತನ; ಚಂಪಕ್‌ ರಾಯ್‌ ಮೇಲೆ ಎಸ್‌ಐಟಿ ಅನುಮಾನ

ಅಯೋಧ್ಯೆ: ರಾಮ ಮಂದಿರ(Ram Mandir)ದ ದೇಣಿಗೆ ಕಳ್ಳತನಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ಸಿದ್ಧಪಡಿಸಿರುವ ವರದಿಯು ಸ್ಪೋಟಕ ಮಾಹಿತಿಗಳನ್ನು ಹೊರಹಾಕಿದೆ.  ಬಂಧಿತ ಆರೋಪಿಗಳಿಗೆ ಸಿಸಿಟಿವಿ ಕಣ್ತಪ್ಪಿಸಿ ಅಥವಾ ಸಿಸಿಟಿವಿಗೆ ಅಡ್ಡಿಪಡಿಸಿ ಹಣ ಕದಿಯುತ್ತಿದ್ದರು, ಆದರೆ ಹಣ ಎಣಿಕೆ ಮಾಡುವ ಜಾಗದಲ್ಲಿ ಟ್ರಸ್ಟನ ಅಧಿಕಾರಿಗಳು ಗುಪ್ತವಾಗಿ ಸ್ಪೈ ಕ್ಯಾಮರ ಅಳವಡಿಸಿದ್ದರು, ಇದೀಗ ಇದರಲ್ಲಿ ಹಣ ಕದಿಯುವ ದೃಷ್ಯ ಸೆರೆಯಾಗಿದೆ ಎಂಬ ಮಾಹಿತಿ ಲಭಿಸಿದೆ.

ದಿಢೀರ್‌ ರಾಜೀನಾಮೆ ನೀಡಿದ ಚಂಪತ್‌ ರಾಯ್‌...!

ಇನ್ನು ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಚಂಪತ್ ರಾಯ್ ನಿನ್ನೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಜೊತೆಗೆ ಟ್ರಸ್ಟಿ ಅನಿಲ್ ಮಿಶ್ರಾ ಅವರ ಪಾತ್ರದ ಬಗ್ಗೆ ಎಸ್‌ಐಟಿ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ಇಡೀ ಹಗರಣದಲ್ಲಿ ಇವರ ಆಪ್ತರೇ ಭಾಗಿಯಾಗಿರುವುದು ದೃಢಪಟ್ಟಿದೆ. ಎಸ್‌ಐಟಿ ಅಧಿಕಾರಿಗಳು ಏಪ್ರಿಲ್ 27 ರಿಂದ ಜೂನ್ 5 ರವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡಿದಾಗ ಬೆಚ್ಚಿಬೀಳುವ ಸತ್ಯ ಬಯಲಾಗಿದೆ. ದೇಗುಲದ ಹಣ ಎಣಿಸುವ ಸಿಬ್ಬಂದಿ ಕೇವಲ 40 ದಿನಗಳ ಅವಧಿಯಲ್ಲಿ ಬರೋಬ್ಬರಿ 70 ಬಾರಿ ಕಾಣಿಕೆ ಹಣವನ್ನು ಕದ್ದಿದ್ದಾರೆ.

ಎಲ್ಲ ಗೊತ್ತಿದ್ದರು ನಿರ್ಲಕ್ಷ ಮಾಡಿದ್ದ ಚಂಪತ್‌ ರಾಯ್‌...!

ರಾಮ ಮಂದಿರದ ದೇಣಿಗೆ ಹಣದಲ್ಲಿ ಈ ಹಿಂದೆಯೇ ವ್ಯತ್ಯಾಸ ಕಂಡು ಬಂದಿತ್ತು. ಈ ಕುರಿತು ಚಂಪತ್‌ ರಾಯ್‌ ಅವರಿಗೆ ದೂರುಗಳು ಕೂಡ ಬಂದಿದ್ದವು, ಆದರೆ ಅವರು ಪೊಲೀಸರಿಗೆ ದೂರು ನೀಡದೆ ಉದ್ದೇಶ ಪೂರ್ವಕವಾಗಿ ನಿರ್ಲಕ್ಷಿಸಿದ್ದರು ಎಂದು ವರದಿಯಾಗಿದೆ. ಅಷ್ಟೇ ಅಲ್ಲದೆ ಬಂಧಿತ ಎಂಟು ಆರೋಪಿಗಳೂ ಕೂಡ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರ ನೇರ ಶಿಫಾರಸಿನ ಮೇರೆಗೆ ಬ್ಯಾಕ್ ಗ್ರೌಂಡ್ ವೆರಿಫಿಕೇಶನ್ ಇಲ್ಲದೆ ಕೆಲಸಕ್ಕೆ ಸೇರಿದ್ದರು ಎಂದು ಎಸ್‌ಐಟಿ ವರದಿಯಲ್ಲಿ ಉಲ್ಲೇಖಿಸಿದೆ.

ಸ್ಪೈ ಕ್ಯಾಮರಾದಲ್ಲಿ ಸೆರೆಯಾಯ್ತು ಕಳ್ಳತನ ದೃಷ್ಯ...!

ಆರೋಪಿಗಳಾದ ಟಿನ್ನು ಯಾದವ್, ಮನೀಶ್, ಲವ್ ಕುಶ್ ಮತ್ತು ಅನುಕಲ್ಪ್ ಅವರಿಗೆ ಎಣಿಕೆ ಕೊಠಡಿಯಲ್ಲಿದ್ದ ಸಾಮಾನ್ಯ ಸಿಸಿಟಿವಿ ಕ್ಯಾಮೆರಾಗಳು ಎಲ್ಲೆಲ್ಲಿವೆ ಮತ್ತು ಅವುಗಳ ಕಣ್ಣು ತಪ್ಪಿಸುವ ‘ಬ್ಲೈಂಡ್ ಸ್ಪಾಟ್‌ಗಳು’ ಯಾವುವು ಎಂಬುದು ಚೆನ್ನಾಗಿ ಗೊತ್ತಿತ್ತು. ಹಣವನ್ನು ಜೇಬಿಗೆ ಇಳಿಸುವಾಗ ಇವರು ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡುತ್ತಿದ್ದರು ಅಥವಾ ಅದರ ವೀಕ್ಷಣೆಗೆ ಅಡ್ಡಿಪಡಿಸುತ್ತಿದ್ದರು.

ಆದರೆ, ತನಿಖಾಧಿಕಾರಿಗಳು ಆ ಕೊಠಡಿಯೊಳಗೆ ಯಾರಿಗೂ ತಿಳಿಯದಂತೆ ಅಳವಡಿಸಿದ್ದ ‘ಗುಪ್ತ ಕಣ್ಗಾವಲು ಕ್ಯಾಮೆರಾ’ (Hidden Spy Camera) ಬಗ್ಗೆ ಆರೋಪಿಗಳಿಗೆ ಸುಳಿವಿರಲಿಲ್ಲ. ಈ ರಹಸ್ಯ ಕ್ಯಾಮೆರಾದಲ್ಲಿ ಇವರು ನಗದು ಕದಿಯುವ ದೃಶ್ಯಗಳು ಡಿಜಿಟಲ್ ಸಾಕ್ಷಿಯಾಗಿ ಸೆರೆಯಾಗಿದ್ದು, ಇಡೀ ಗ್ಯಾಂಗ್ ಜೈಲು ಪಾಲಾಗುವಂತೆ ಮಾಡಿದೆ. ಬಂಧಿತರಲ್ಲಿ ಟಿನ್ನು ಯಾದವ್ ಮತ್ತು ಸುಭಾಷ್ ಟ್ರಸ್ಟ್‌ನ ನೌಕರರಾದರೆ, ಉಳಿದ ಆರು ಜನ ಎಣಿಕೆಗೆ ಸಹಾಯ ಮಾಡಲು ಬಂದಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ದ ಸಿಬ್ಬಂದಿಯಾಗಿದ್ದಾರೆ. ಸದ್ಯ ಈ ಆರೋಪಗಳ ಕುರಿತು ನ್ಯಾಯಾಲಯದಲ್ಲಿ ಅಂತಿಮ ತೀರ್ಪು ಬರಬೇಕಿದೆ.

By thebigbulletin.com - 29-06-2026


Ads in Post