Search


ರಾಮಲಿಂಗ ರೆಡ್ಡಿ ರಾಜೀನಾಮೆ: ಕಾರ್ಯಕರ್ತರಿಂದ ಕಾಂಗ್ರೆಸಿಗೆ ಸಾಮೂಹಿಕ ರಾಜೀನಾಮೆ...!

ಬೆಂಗಳೂರು : ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎರಡೇ ದಿನಕ್ಕೆ ಹಿರಿಯ ಕಾಂಗ್ರೆಸ್‌ ನಾಯಕ ರಾಮಲಿಂಗ ರೆಡ್ಡಿ ರಾಜೀನಾಮೆ (Ramalinga Reddy Resigns) ನೀಡಿದ್ದು, ಇದರಿಂದಾಗಿ ಅವರ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ, ಕಾಂಗ್ರೆಸ್‌ಗೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಅವರ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದು. ಜಿಬಿಎ ಚುನಾವಣೆಯಲ್ಲಿ ಬುದ್ದಿ ಕಲಿಸುತ್ತೇವೆ ಎಂದು ಆಕ್ರೋಶಗೊಂಡಿದ್ದಾರೆ.

ಬೆಂಗಳೂರಿನ ಕೋರಮಂಗಲದ ಕಚೇರಿಯಲ್ಲಿ ಮಹತ್ವದ ಪತ್ರಿಕಾಗೋಷ್ಠಿ ನಡೆಸಿದ ರಾಮಲಿಂಗಾ ರೆಡ್ಡಿ, ರಾಜೀನಾಮೆಯ ಹಿಂದಿನ ಅಸಲಿ ಕಾರಣಗಳನ್ನು ಮುಕ್ತವಾಗಿ ಬಿಚ್ಚಿಟ್ಟಿದ್ದಾರೆ. ಜಲಸಂಪನ್ಮೂಲ ಇಲಾಖೆ ನೀಡಿದ್ದಕ್ಕೆ ಬೇಸರ ಎಂಬ ಒಂದೇ ಕಾರಣಕ್ಕೆ ರಾಜೀನಾಮೆ ನೀಡುತ್ತಿಲ್ಲ. ಈಗಿನ ಮುಖ್ಯಮಂತ್ರಿಗಳು ಹಿಂದೆ ಅವರಾಗಿಯೇ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ, ಅದರಂತೆ ನಡೆದುಕೊಂಡಿಲ್ಲ. ಈ ವಿಚಾರ ಜನರಿಗೆ ತಿಳಿಯಬೇಕು ಎಂದು ಹೇಳಿದರು.

ರಾಮಲಿಂಗ ರೆಡ್ಡಿಯವರ ಹಠಾತ್‌ ರಾಜೀನಾಮೆಯಿಂದ ಅವರ ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದು, ಒಬ್ಬೊಬ್ಬರಾಗಿ ಅವರ ಕಛೇರಿಯ ಬಳಿಗೆ ಆಗಮಿಸುತ್ತಿದ್ದಾರೆ, ಅತ್ತ ಎಐಸಿಸಿ ಕಾರ್ಯದರ್ಶಿ ಅಭೀಷೇಕ್‌ ದತ್ತ ಕೂಡ ಅವರ ಕಚೇರಿಗೆ ಭೇಟಿ ನೀಡಿ ಮನವೊಲಿಸುವ ಕೆಲಸ ಮಾಡಿದ್ದಾರೆ. ಇನ್ನು ಈ ಕುರಿತು ಕೆಪಿಸಿಸಿ ನೂತನ ಅಧ್ಯಕ್ಷ ಬಿ,ಕೆ ಹರಿ ಪ್ರಸಾದ್‌ ಮಾತನಾಡಿದ್ದು " ರಾಮಲಿಂಗ ರೆಡ್ಡಿ ಪಕ್ಷದ ಹಿರಿಯ ನಾಯಕ, ಸ್ವಲ್ಪ ಬೇಸರಗೊಂಡಿದ್ದಾರೆ, ಅವರ ಜೊತೆ ಮಾತನಾಡಿ ಮನವೊಲಿಸುವ ಕೆಲಸ ಮಾಡ್ತೇವೆ ಎಂದು ಭರವಸೆ ನೀಡಿದ್ದಾರೆ.

ಇಂದು ಮಧ್ಯಹ್ನ 1 ಗಂಟೆಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ, ಮಲ್ಲಿಕಾರ್ಜುನ್‌ ಖರ್ಗೆ ಅವರು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಹಿನ್ನಲೆ ಹೈಕಮಾಂಡ್‌ ನಾಯಕರು ರಾಜ್ಯಕ್ಕೆ ಆಗಮಿಸುತ್ತಿದ್ದು, ಈ ವೇಳೆ ರಾಹುಲ್‌ ಗಾಂಧಿ ರಾಮಲಿಂಗ ರೆಡ್ಡಿಯವರನ್ನ ಭೇಟಿಯಾಗಿ ಮಾತನಾಡುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ. ಈಗಾಗಲೇ ಎಐಸಿಸಿ ಕಾರ್ಯದರ್ಶಿ ಅಭಿಷೇಕ್‌ ದತ್ತ ಕೋರಮಂಗಲದಲ್ಲಿರುವ ರಾಮಲಿಂಗ ರೆಡ್ಡಿಯವರ ಕಚೇರಿಗೆ ಆಗಮಿಸಿದ್ದು , ಸಚಿವರ ಮನವೊಲಿಕೆ ಯತ್ನಿಸಿದ್ದಾರೆ ಎಂಬುದು ತಿಳಿದು ಬಂದಿದೆ. 

By Ravikumar - 05-06-2026


Ads in Post