Search


ಬೆಂಗಳೂರಲ್ಲಿ ದಾಖಲೆಯ ಟ್ರಾಫಿಕ್ ಜಾಮ್; ರಾತ್ರಿಯಿಡಿ ರಸ್ತೆಯಲ್ಲಿ ಪರದಾಡಿದ ಪ್ರಯಾಣಿಕರು

ದಸರಾ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಲು ಮುಂದಾಗಿದ್ದ ಪ್ರಯಾಣಿಕರು ಬೆಂಗಳೂರಿನಲ್ಲಿ ಉಂಟಾದ ಭಾರೀ ಟ್ರಾಫಿಕ್ ಜಾಮ್‌ನಿಂದಾಗಿ ತೀವ್ರ ಪರದಾಟ ಅನುಭವಿಸಿದ್ದಾರೆ. ಶುಕ್ರವಾರ ರಾತ್ರಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾದ ಪರಿಣಾಮ, ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಪ್ರಯಾಣಿಕರು ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿಕೊಳ್ಳುವಂತಾಯಿತು.

ನಗರದ ಮೈಸೂರು ರಸ್ತೆ, ತುಮಕೂರು ರಸ್ತೆ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ದಸರಾ ಹಬ್ಬಕ್ಕಾಗಿ ಊರಿಗೆ ತೆರಳುತ್ತಿದ್ದ ಖಾಸಗಿ ಬಸ್‌ಗಳೂ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ದವು. ಕೆಲವು ಬಸ್‌ಗಳು ಬೆಳಗಿನ ಜಾವ 3ರಿಂದ 4 ಗಂಟೆಯ ವೇಳೆಗೆ ಮಾತ್ರ ಬೆಂಗಳೂರು ನಗರವನ್ನು ದಾಟಲು ಸಾಧ್ಯವಾಯಿತು. ಇದರಿಂದ ನಿಗದಿತ ಸಮಯಕ್ಕೆ ಊರು ತಲುಪಬೇಕಿದ್ದ ಪ್ರಯಾಣಿಕರು ತೊಂದರೆ ಅನುಭವಿಸಿದರು.

ಇದರ ನಡುವೆ ಸುರಿದ ಜಿಟಿಜಿಟಿ ಮಳೆಯೂ ಪ್ರಯಾಣಿಕರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿತು. ಗಂಟೆಗಟ್ಟಲೆ ವಾಹನಗಳಲ್ಲೇ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ಮಕ್ಕಳು, ವೃದ್ಧರು ಸೇರಿದಂತೆ ಅನೇಕರು ಹೈರಾಣಾದರು. ಹಬ್ಬದ ಸಂಭ್ರಮದಲ್ಲಿ ಊರಿಗೆ ತೆರಳಬೇಕಿದ್ದ ಜನರಿಗೆ ಪ್ರಯಾಣವೇ ಕಿರಿಕಿರಿಯಾಗಿ ಪರಿಣಮಿಸಿತು.

ಭಾರೀ ಟ್ರಾಫಿಕ್ ಜಾಮ್‌ನಿಂದ ಬೇಸತ್ತ ಸಾರ್ವಜನಿಕರು ಸಂಚಾರ ಸುಗಮಗೊಳಿಸುವಂತೆ ಸ್ಥಳೀಯ ಸಂಚಾರಿ ಪೊಲೀಸ್ ಠಾಣೆಗಳಿಗೆ ಕರೆ ಮಾಡಿ ಮನವಿ ಮಾಡಿದರು. ದಸರಾ ರಜೆ ಹಿನ್ನೆಲೆಯಲ್ಲಿ ಊರಿಗೆ ತೆರಳುವವರ ಸಂಖ್ಯೆ ಹೆಚ್ಚಾಗಲಿದೆ ಎಂಬ ನಿರೀಕ್ಷೆಯಿದ್ದರೂ, ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಸೂಕ್ತ ವ್ಯವಸ್ಥೆ ಕೈಗೊಂಡಿಲ್ಲ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.

By Ravikumar - 17-10-2026


Ads in Post