ನವದೆಹಲಿ: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ಆತ್ಮಕತೆಯಾದ ʻಬಿಲಾಂಗಿಂಗ್: ಎ ಜರ್ನಿ ಆಫ್ ಲವ್ʼ ಪುಸ್ತಕವನ್ನ ಪೆಂಗ್ವಿನ್ ಪ್ರಕಾಶನ ಸಂಸ್ಥೆ ಪ್ರಕಟಿಸದಿರಲು ನಿರ್ಧರಿಸಿದ್ದು, ಈ ವಿಷಯ ಇದೀಗ ವಿವಾದಕ್ಕೆ ಕಾರಣವಾಗಿದೆ, ʻಪೆಂಗ್ವಿನ್ ರಾಂಡಮ್ ಹೌಸ್ ಭಾರತದಲ್ಲಿ ಪುಸ್ತಕವನ್ನ ಪ್ರಕಟಿಸದಿರಲು ಮೂರು ಕಾರಣಗಳಿವೆ ಎಂದು ತಿಳಿದು ಬಂದಿದೆ. ಪ್ರಧಾನಿ ಮೋದಿ ನಾಯಕತ್ವ ಸೇರಿದಂತೆ ಪುಸ್ತಕದಲ್ಲಿನ ಕೆಲವು ವಿಚಾರಗಳು ಈ ಪುಸ್ತಕ ಪ್ರಕಟಿಸದಿರಲು, ಚರ್ಚೆಯ ಕೇಂದ್ರ ಬಿಂದುವಾಗಿವೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಮೂಲಗಳ ಪ್ರಕಾರ, ಆತ್ಮಕತೆಯ ಹಸ್ತಪ್ರತಿಯಲ್ಲಿ ಚೀನಾ ಗಡಿಯಲ್ಲಿನ ಅತಿಕ್ರಮಣಗಳು ಮತ್ತು ಗಡಿ ಪರಿಸ್ಥಿತಿ ಕುರಿತು ಸುದೀರ್ಘವಾಗಿ ಉಲ್ಲೇಖಿಸಲಾಗಿದೆ. ಚೀನಾ ಗಡಿ ವಿಚಾರವನ್ನು ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಹಲವು ಬಾರಿ ಸಂಸತ್ ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ, ಈ ಭಾಗವೂ ಪುಸ್ತಕದ ಪ್ರಮುಖ ರಾಜಕೀಯ ವಿಷಯವಾಗಿದೆ. ಇದರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ, ಅವರ ಕಾರ್ಯವೈಖರಿ ಹಾಗೂ ಕೇಂದ್ರ ಸರ್ಕಾರದ ಹಲವು ಪ್ರಮುಖ ನೀತಿಗಳ ಕುರಿತು ಸೋನಿಯಾ ಗಾಂಧಿ ಅಭಿಪ್ರಾಯ ಮತ್ತು ದೇಶದ ಸಾಮಾಜಿಕ ಹಾಗೂ ರಾಜಕೀಯ ಬೆಳವಣಿಗೆಗಳ ಮೇಲೆ ಆರ್‌ಎಸ್‌ಎಸ್ ಸಂಘಟನೆಯ ಪ್ರಭಾವದ ಕುರಿತು ಸೋನಿಯಾ ತಮ್ಮ ದೃಷ್ಟಿಕೋನವನ್ನ ದಾಖಲಿಸಿದ್ದು, ಇದು ವಿವಾದಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಈ ವಿವಾದದ ಅಂಶಗಳನ್ನ ತಿದ್ದುಪಡಿ ಮಾಡುವಂತೆ ಪೆಂಗ್ವಿನ್ ಪ್ರಕಾಶನ ಸಂಸ್ಥೆ ಸಲಹೆ ನೀಡಿತ್ತು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದ್ದು. ಆದರೆ ಇದಕ್ಕೆ ಸೋನಿಯಾ ಗಾಂಧಿ ಅವರು ಒಪ್ಪಿಲ್ಲ, ʻ ತಮ್ಮ ವೈಯಕ್ತಿಕ ಅನುಭವ ಮತ್ತು ದೃಷ್ಟಿಕೋನವನ್ನು ಆಧರಿಸಿರುವ ಪುಸ್ತಕದಲ್ಲಿ ಬದಲಾವಣೆ ಮಾಡಲು ಒಪ್ಪಿಲ್ಲ ಎಂದು ಕಾಂಗ್ರೆಸ್ ಮೂಲಗಳು ಮಾಹಿತಿ ನೀಡಿವೆ. ಈ ಬೆಳವಣಿಗೆಯನ್ನು ಕಾಂಗ್ರೆಸ್ ರಾಜಕೀಯವಾಗಿ ಟೀಕಿಸಿದ್ದು, ಪುಸ್ತಕದ ವಿಚಾರದಲ್ಲಿ ಒತ್ತಡ ಹೇರುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದೆ. ಇದೀಗ ಭಾರತದಲ್ಲಿ ಪುಸ್ತಕದ ಪ್ರಕಟಣೆಯ ಹಕ್ಕುಗಳನ್ನು ಪಡೆಯಲು ಇತರ ಪ್ರಕಾಶನ ಸಂಸ್ಥೆಗಳೂ ಆಸಕ್ತಿ ತೋರಿವೆ.