ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಮಹಿಳೆಯೊಬ್ಬರು ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಾರೆ ಎಂದು ಆರೋಪಿಸಿ ಪ್ರಶ್ನಿಸಿದ ಟ್ಯಾಟೂ ಆರ್ಟಿಸ್ಟ್ ಕಮ್ ನಟ ಅರ್ಜುನ್ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ‘ಘೋಸ್ಟ್ ಟ್ಯಾಟೂ ಆರ್ಟಿಸ್ಟ್’ ಎಂದೇ ಪರಿಚಿತರಾಗಿರುವ ಅರ್ಜುನ್ಗೆ ಸುಮಾರು ಎರಡು ವರ್ಷಗಳ ಹಿಂದೆ ಟ್ಯಾಟೂ ಸ್ಟುಡಿಯೋದಲ್ಲಿ ಸಂಪ್ರಿತಾ ಎಂಬ ಮಹಿಳೆಯ ಪರಿಚಯವಾಗಿತ್ತು ಎನ್ನಲಾಗಿದೆ.
ಸಂಪ್ರಿತಾಗೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎನ್ನಲಾಗಿದೆ. ಪತಿ ಮೃತಪಟ್ಟಿರುವುದಾಗಿ ಅರ್ಜುನ್ಗೆ ಪರಿಚಯಿಸಿಕೊಂಡಿದ್ದ ಆಕೆಯೊಂದಿಗೆ ಬಳಿಕ ಆತ್ಮೀಯತೆ ಬೆಳೆದು ಪ್ರೀತಿಗೆ ತಿರುಗಿತ್ತು. ಇದೇ ವೇಳೆ ಅರ್ಜುನ್ ಕೂಡ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು ಎನ್ನಲಾಗಿದೆ. ಮದುವೆಯಾಗುವುದಾಗಿ ಸಂಪ್ರಿತಾ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಅರ್ಜುನ್ ಆಕೆಗೆ ಹಲವು ಬಾರಿ ಹಣ ನೀಡಿದ್ದರು ಎಂದು ಆರೋಪಿಸಲಾಗಿದೆ.
ಆದರೆ ಕಳೆದ ಒಂದು ವರ್ಷದಿಂದ ಮದುವೆಯನ್ನು ನಾಳೆ, ನಾಡಿದ್ದು ಎಂದು ಮುಂದೂಡುತ್ತಿದ್ದಳು ಎನ್ನಲಾಗಿದೆ. ಇತ್ತೀಚೆಗೆ ಸಂಪ್ರಿತಾಗೆ ಅರ್ಜುನ್ ಕರೆ ಮಾಡಿದರೂ ಆಕೆ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಮನೆ ಬಳಿ ತೆರಳಿದ್ದರು. ಈ ವೇಳೆ ಸಂಪ್ರಿತಾ ಮತ್ತೊಬ್ಬ ವ್ಯಕ್ತಿಯೊಂದಿಗೆ ವಿಡಿಯೋ ಕಾಲ್ನಲ್ಲಿ ಮಾತನಾಡುತ್ತಿರುವುದನ್ನು ಕಂಡು ಅರ್ಜುನ್ ಪ್ರಶ್ನಿಸಿದ್ದು, ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ಸಂದರ್ಭದಲ್ಲಿ ಅರ್ಜುನ್ ಮೇಲೆ ರಾಡ್ನಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮರ್ಯಾದೆಗೆ ಅಂಜಿ ಆರಂಭದಲ್ಲಿ ಅಪಘಾತವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅರ್ಜುನ್ ವಿಡಿಯೋ ಮಾಡಿದ್ದರು ಎನ್ನಲಾಗಿದೆ. ಇತ್ತೀಚೆಗೆ ಸಿನಿಮಾಗಳಲ್ಲೂ ನಟಿಸುವ ಅವಕಾಶ ಪಡೆದಿರುವ ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಒಂದು ಮಿಲಿಯನ್ಗೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ ಎಂದು ತಿಳಿದುಬಂದಿದೆ.