ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇನ್ಮುಂದೆ ಹೋರಾಟ ಮಾಡೋದಕ್ಕೂ ಬಾಡಿಗೆ ಕೊಡ್ಬೇಕಿದೆ, ಹೌದು.. ನೀವು ಓದ್ತಿರುವ ಸುದ್ದಿ ಅಕ್ಷರಶಃ ಸತ್ಯ, ಇನ್ಮುಂದೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಬೇಕು ಎಂದರೆ ಬರೋಬ್ಬರಿ 1 ಲಕ್ಷ ಬಾಡಿಗೆ ಹಾಗೂ 10 ಸಾವಿರ ಮುಂಗಡ ಹಣವನ್ನ ಗ್ರೇಟರ್ ಬೆಂಗಳೂರು ಅಥಾರಿಟಿಗೆ ಕಟ್ಟಬೇಕು ಎಂದು ಆದೇಶ ಹೊರಡಿಸಲಾಗಿದೆ. ಈ ಆದೇಶಕ್ಕೆ ಸಾರ್ವಜನಿಕರು ಮತ್ತು ಹೋರಾಟಗಾರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ಆದೇಶವನ್ನ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ನೀವು ವಾಹನ ಪಾರ್ಕ್ ಮಾಡೋದ್ರಿಂದ ಹಿಡಿದು, ಮೂತ್ರ ವಿಸರ್ಜನೆವರೆಗೆ ಪ್ರತಿಯೊಂದಕ್ಕು ಹಣ ಕೊಡ್ಬೇಕಿದೆ, ಹೀಗಿರುವ ನಡುವೆ ಜಿಬಿಎ ಮತ್ತೊಂದು ಆದೇಶ ಹೊರಡಿಸಿದ್ದು, ನೀವು ನಿಮ್ಮ ಸಮಸ್ಯೆಗಳಿಗೆ ಆಗ್ರಹಿಸಿ ಸರ್ಕಾರದ ಮುಂದೆ ಪ್ರತಿಭಟನೆ ನಡೆಸಬೇಕು ಎಂದರೂ ಕೂಡ ಜಿಬಿಎಗೆ ಹಣ ಕಟ್ಟಬೇಕಿದೆ. ಹೌದು.. ಇನ್ಮುಂದೆ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಬೇಕು ಎಂದು ಜಿಬಿಎ ಹಣ ಕಟ್ಟಿ ಜಾಗವನ್ನ ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಳ್ಳಬೇಕಿದೆ.
ಪ್ರತಿಭಟನೆಗೆ ₹1 ಲಕ್ಷ ಬಾಡಿಗೆ, ₹10,000 ಅಡ್ವಾನ್ಸ್
ಪ್ರತಿಭಟನೆ ನಡೆಸಲು ರಾಜಧಾನಿಯಲ್ಲಿ ಸೂಕ್ತ ಸ್ಥಳವಿಲ್ಲದ ಕಾರಣ ರಾಜ್ಯ ಹೈಕೋರ್ಟ್ ಸರ್ಕಾರಕ್ಕೆ ಸಂಚಾರ ಸಮಸ್ಯೆಯಾಗದಂತೆ ಪ್ರತಿಭಟನೆ ನಡೆಸಲು ಒಂದು ಜಾಗವನ್ನ ನಿಗದಿಪಡಿಸಲು ಸೂಚಿಸಿತ್ತು. ಈ ಸೂಚನೆ ಅನ್ವಯ ರಾಜ್ಯ ಸರ್ಕಾರ ʻಫ್ರೀಡಂ ಪಾರ್ಕ್ ಆಯ್ಕೆ ಮಾಡಿತ್ತು. ಅಂದಿನಿಂದಲೂ ಇಲ್ಲಿ ಪೊಲೀಸ್ ಅನುಮತಿ ಪಡೆದು ಪ್ರತಿಭಟನೆಗಳು ನಡೆಸಲಾಗುತ್ತಿತ್ತು, ಈ ಜಾಗದಲ್ಲಿ ಪ್ರತಿಭಟನೆ ನಡೆಸುವ ಪ್ರತಿಭಟನಕಾರರು ಬಿಸಿಲು ಮತ್ತು ಮಳೆಯಿಂದ ರಕ್ಷಿಸುವ ಉದ್ದೇಶದಿಂದ 2018ರಲ್ಲಿ ಸಿದ್ದರಾಮ್ಯನವರು ಅಲ್ಲೊಂದು ಕಟ್ಟಡವನ್ನು ಉದ್ಘಾಟಿಸಿದ್ದರು.
ಆದರೆ ಇತ್ತೀಚೆಗೆ ಈ ಕಟ್ಟಡವನ್ನು ಜಿಬಿಎ ತನ್ನ ವ್ಯಾಪ್ತಿಗೆ ತೆಗೆದುಕೊಂಡಿದ್ದು, ಇಲ್ಲಿ ಪ್ರತಿಭಟನೆ ನಡೆಸಲು ದಿನಕ್ಕೆ ₹1 ಲಕ್ಷ ರೂಪಾಯಿ ಬಾಡಿಗೆ ಮತ್ತು ₹10,000 ರೂಪಾಯಿ ಮುಂಗಡ ಹಣ ಪಾವತಿಸಬೇಕೆಂದು ಆದೇಶ ಹೊರಡಿಸಿದ್ದಾರೆ. ಅದರಲ್ಲೂ, ಸಾರ್ವಜನಿಕರ ತೆರಿಗೆ ಹಣದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಲಾದ ಈ ಬಹುಮಹಡಿ ಪಾರ್ಕಿಂಗ್ ಕಟ್ಟಡದ ಮೇಲ್ಭಾಗದ ಸಂಕೀರ್ಣಕ್ಕೆ ಇಷ್ಟು ಭಾರಿ ಮೊತ್ತದ ಶುಲ್ಕ ನಿಗದಿ ಮಾಡಿರುವುದು ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನ ಎಂದು ಹೋರಾಟಗಾರರು ದೂರಿದ್ದಾರೆ.
ಅಷ್ಟೇ ಅಲ್ಲದೇ ಫ್ರೀಡಂ ಪಾರ್ಕ್ನಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಕನಿಷ್ಟ ಮೂಲಭೂತ ಸೌಕರ್ಯಗಳಿಲ್ಲ. ಇಂತಹ ಕೊರತೆಗಳ ನಡುವೆ ಜಿಬಿಎ ಲಕ್ಷ ರೂಪಾಯಿ ಶುಲ್ಕ ವಿಧಿಸಿದ್ದು. ಜನರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಹಾಗೂ ಕೂಡಲೇ ಸರ್ಕಾರ ಈ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.