Search


ರೇಣುಕಾಸ್ವಾಮಿ ಪ್ರಕರಣ; ಸಾಕ್ಷಿಗೆ ಬೆದರಿಕೆ ಹಾಕಿದ್ದ 3 ಡಿ-ಫ್ಯಾನ್ಸ್‌ ಅರೆಸ್ಟ್‌..!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ 17ನೇ ಸಾಕ್ಷಿ ಸಂದೀಪ್‌ಗೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಮೂವರು ಆರೋಪಿಗಳನ್ನ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಆರೋಪಿಗಳು ʻಡಿ-ಕಮ್ಯೂನಿಟಿʼ ಎಂಬ ಪೇಸ್‌ಬುಕ್‌ ಪೇಜ್‌ನ ಅಡ್ಮಿನ್‌ ಎಂಬುದು ಬೆಳಕಿಗೆ ಬಂದಿದೆ. 

ರೇಣುಕಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯದ ಮುಂದೆ ಪ್ರಕರಣದ 17ನೇ ಸಾಕ್ಷಿ ಸಂದೀಪ್‌ ಎಂಬುವವರು ತಮಗೆ ಬೆದರಿಕೆ ಕರೆಗಳು ಬರ್ತಿವೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನ ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಸಾಕ್ಷಿಗೆ ರಕ್ಷಣೆ ನೀಡಿ, ಆರೋಪಿಗಳನ್ನ ಪತ್ತೆ ಹಚ್ಚಲು ತನಿಖಾಧಿಕಾರಿಗಳಿಗೆ ಸೂಚನೆ ನೀಡಿತ್ತು. ಇದರ ಅನ್ವಯ ಇದೀಗ ಕಾಮಾಕ್ಷಿಪಾಳ್ಯ ಪೊಲೀಸರು 3 ಆರೋಪಿಗಳನ್ನ ಬಂಧಿಸಿದ್ದಾರೆ. 

ದರ್ಶನ್ ಅಭಿಮಾನಿಗಳಾದ ಸುಹಾಸ್, ವೇಣು ಮತ್ತು ಪುನೀತ್‌ ಬಂಧಿತ ಆರೋಪಿಗಳಾಗಿದ್ದು, ಮೂವರು ಮೂಲತಃ ತುಮಕೂರಿನವರು. ಪುನೀತ್ ʻಡಿ-ಕಮ್ಯುನಿಟಿʼ (D Community) ಫೇಸ್‌ಬುಕ್‌ ಪೇಜ್‌ನ ಅಡ್ಮಿನ್ ಅನ್ನೋದು ಬೆಳಕಿಗೆ ಬಂದಿದೆ. ಸಾಕ್ಷ್ಯನಾಶಕ್ಕೆ ಸಂಚು ರೂಪಿಸಿದ ಈ ಅಭಿಮಾನಿಗಳ ಕೃತ್ಯದಿಂದ ನಟ ದರ್ಶನ್ ಅಂಡ್ ಗ್ಯಾಂಗ್‌ಗೆ ಕಾನೂನು ಸಂಕಷ್ಟ ಮತ್ತು ಜೈಲು ವಾಸದ ಭೀತಿ ಇನ್ನಷ್ಟು ಹೆಚ್ಚಾಗಿದೆ.

ದರ್ಶನ್‌ ಹೆಸರು ಹೇಳಿದ್ದೇ ಸಂದೀಪ್‌

ಎಂ.ಆರ್‌ ಪುನೀತ್‌‌ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿದಾರನಾಗಿದ್ದಾನೆ. ರೇಣುಕಾಸ್ವಾಮಿ ಶವ ಬಿಸಾಡಲು ಮತ್ತೊಬ್ಬ ಸಾಕ್ಷಿ ಸಂದೀಪ್‌ಗೆ ಸ್ಕಾರ್ಪಿಯೋ ಕಾರು ಕೊಟ್ಟಿದ್ದೇ ಈ ಪುನೀತ್‌. ಶವ ಬಿಸಾಡಿದ ಬಳಿಕ ಕಾರನ್ನ ತೊಳೆಸಿದ್ದ. ಆ ಕಾರನ್ನ ದರ್ಶನ್‌ಗೆ ನೀಡಿದ್ದಾಗಿ, ಬಳಿಕ ರಕ್ತದ ಕಲೆ ತೊಳಿಸಿದ್ದಾಗಿಯೂ ಹೇಳಿಕೆ ನೀಡಿದ್ದ. ಹಾಗಾಗಿ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಕರೆತಂದಿಲ್ಲ ಎಂದು ಹೇಳುವಂತೆ ಪುನೀತ್‌, ಸಂದೀಪ್‌ಗೆ ಒತ್ತಡ ಹೇರಿದ್ದ. ಈ ಬಗ್ಗೆ ಕೋರ್ಟ್‌ಗೆ ಸಂದೀಪ್‌ ಪ್ರಮಾಣ ಪತ್ರ ಸಲ್ಲಿಸಿದ್ದ.

ಸಾಕ್ಷಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಿದ್ದ ಕಾಮಾಕ್ಷಿಪಾಳ್ಯ ಪೊಲೀಸರು ಇಂದು ಮೂವರನ್ನ ಬಂಧಿಸಿದ್ದಾರೆ. ವಿಚಾರಣೆ ಮುಂದುವರಿಸಿದ್ದಾರೆ.

 

By Ravikumar - 02-07-2026


Ads in Post