ಬೆಂಗಳೂರು: ನಟ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಗ್ಗೆ ನಟ ರಿಷಬ್ ಶೆಟ್ಟಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸಿನಿಮಾ ಹಾಗೂ ಯಶ್ ಅವರ ಅಭಿನಯವನ್ನು ಶ್ಲಾಘಿಸಿರುವ ರಿಷಬ್, ಕನ್ನಡ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಯಶ್ ಅವರ ಪ್ರಯತ್ನವನ್ನು ಕೊಂಡಾಡಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಿಷಬ್ ಶೆಟ್ಟಿ, ಒಬ್ಬ ಕಲಾವಿದನಾಗಿ ಪಾತ್ರವನ್ನು ಹೃದಯದಿಂದ ಜೀವಂತಗೊಳಿಸುವುದು ಮುಖ್ಯ. ‘ಟಾಕ್ಸಿಕ್’ನಲ್ಲಿ ಪ್ರಭಾವಿ ವ್ಯಕ್ತಿಯ ಹೋರಾಟವನ್ನು ಯಶ್ ಅವರು ಅತ್ಯಂತ ದೃಢವಿಶ್ವಾಸದಿಂದ ಚಿತ್ರಿಸಿರುವುದು ತಮ್ಮನ್ನು ಪ್ರಭಾವಿತಗೊಳಿಸಿದೆ ಎಂದು ಹೇಳಿದ್ದಾರೆ. ಸಿನಿಮಾದ ಕಥಾವಸ್ತು ಮತ್ತು ಪ್ರಮುಖ ಪಾತ್ರಗಳು ಸಾಮಾನ್ಯ ಸಿನಿಮಾಗಳ ರೀತಿಯಲ್ಲಿ ಇರದೇ ಇರಬಹುದು. ಆದರೆ ಅದರಿಂದ ಸಿನಿಮಾದ ಪ್ರಯತ್ನ ತಪ್ಪಾಗಿದೆ ಎಂದರ್ಥವಲ್ಲ ಎಂದು ರಿಷಬ್ ಅಭಿಪ್ರಾಯಪಟ್ಟಿದ್ದಾರೆ.
ಜೊತೆಗೆ, ಜೀವನದಲ್ಲಿ ಅಪರಾಧಿ ಭಾವನೆ ಹೇಗೆ ಬೆಳೆದು ವಿಷತ್ವವನ್ನು ಹೆಚ್ಚಿಸುತ್ತದೆ ಎಂಬ ಅನುಭವವನ್ನು ಪ್ರೇಕ್ಷಕರಿಗೆ ತಲುಪಿಸುವುದು ಸುಲಭದ ಕೆಲಸವಲ್ಲ. ಇಂತಹ ಧೈರ್ಯಶಾಲಿ ಪ್ರಯೋಗವನ್ನು ಕೈಗೊಂಡಿರುವ ಯಶ್ ಅವರೊಂದಿಗೆ ತಾವು ನಿಲ್ಲುವುದಾಗಿ ರಿಷಬ್ ಶೆಟ್ಟಿ ಹೇಳಿದ್ದಾರೆ. ಕನ್ನಡ ಸಿನಿಮಾವನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯುವ ಯಶ್ ಅವರ ಬದ್ಧತೆಯನ್ನು ಮೆಚ್ಚಿರುವ ರಿಷಬ್, ‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್‌ದಾಸ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ತಂಡಕ್ಕೂ ಶುಭಾಶಯ ತಿಳಿಸಿದ್ದಾರೆ.