Search


‘ರಾಮಾಯಣ’ದಲ್ಲಿ ಯಶ್ ರೌದ್ರಾವತಾರ, ರಾವಣನ ತಾಂಡವಕ್ಕೆ ಭರ್ಜರಿ ಮೆಚ್ಚುಗೆ!

ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದಲ್ಲಿ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶಿವನ ಪರಮ ಭಕ್ತನಾದ ರಾವಣನಾಗಿ ತಾಂಡವ ನೃತ್ಯ ಪ್ರದರ್ಶಿಸಿದ್ದಾರೆ. ಅವರ ನೃತ್ಯದಲ್ಲಿ ಅದ್ಭುತ ಎನರ್ಜಿ ಮತ್ತು ಆಕ್ರಮಣಕಾರಿ ಭಾವಾಭಿವ್ಯಕ್ತಿ ಎದ್ದು ಕಾಣುತ್ತಿದೆ. ಶಿವಸ್ತೋತ್ರಗಳ ಹಿನ್ನೆಲೆ, ಖ್ಯಾತ ಕವಿ ಕುಮಾರ್ ವಿಶ್ವಾಸ್ ಅವರ ಸಾಹಿತ್ಯ ಹಾಗೂ ಎ.ಆರ್. ರೆಹಮಾನ್ ಅವರ ಸಂಗೀತ ಈ ದೃಶ್ಯಕ್ಕೆ ಮತ್ತಷ್ಟು ಮೆರುಗು ನೀಡಿದೆ.

ಯಶ್ ಅವರ ತಾಂಡವ ನೃತ್ಯದ ಕಿರು ವಿಡಿಯೋ ತುಣುಕನ್ನು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಭವ್ಯವಾದ ಸೆಟ್, ಹಿನ್ನೆಲೆ ಸಂಗೀತ ಮತ್ತು ರಾವಣನ ಪಾತ್ರಕ್ಕೆ ತಕ್ಕಂತೆ ಯಶ್ ನೀಡಿರುವ ಅದ್ಭುತ ಪ್ರದರ್ಶನ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ವಿಶೇಷವಾಗಿ ಅವರ ನೃತ್ಯದ ಎನರ್ಜಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಟಿ-ಸೀರೀಸ್, ಟಿ-ಸೀರೀಸ್ ಭಕ್ತಿ ಸಾಗರ್ ಹಾಗೂ ‘ವರ್ಲ್ಡ್ ಆಫ್ ರಾಮಾಯಣ’ ಯೂಟ್ಯೂಬ್ ಚಾನೆಲ್‌ಗಳಲ್ಲಿ ಬಿಡುಗಡೆಯಾಗಿರುವ ಈ ವಿಡಿಯೋ ಕೆಲವೇ ಗಂಟೆಗಳಲ್ಲಿ 55 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ಒಂದೆಂದು ಹೇಳಲಾಗುತ್ತಿರುವ ‘ರಾಮಾಯಣ’ದಲ್ಲಿ ದೊಡ್ಡ ತಾರಾಗಣವೇ ಇದೆ. ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ಸನ್ನಿ ಡಿಯೋಲ್, ರವಿ ದುಬೆ, ರಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಮಹತ್ವಾಕಾಂಕ್ಷೆಯ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಖ್ಯಾತ ಹಾಲಿವುಡ್ ಸಂಗೀತ ಸಂಯೋಜಕ ಹಾನ್ಸ್ ಜಿಮ್ಮರ್ ಸಂಗೀತ ನೀಡುತ್ತಿದ್ದಾರೆ. ನಮಿತ್ ಮಲ್ಹೋತ್ರಾ ಮತ್ತು ಯಶ್ ಜಂಟಿಯಾಗಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವರದಿಯ ಪ್ರಕಾರ, ಸಿನಿಮಾ ನವೆಂಬರ್ 5ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಯಶ್ ಅವರ ರಾವಣನ ಪಾತ್ರದ ಬಗ್ಗೆ ಭಾರೀ ನಿರೀಕ್ಷೆ ಮೂಡಿದ್ದು, ಅವರ ತಾಂಡವ ನೃತ್ಯದ ವಿಡಿಯೋ ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

By Reporter Desk - 21-10-2026


Ads in Post