Search


ಬ್ರಿಕ್ಸ್ ಸಭೆಗೂ ಒಂದು ದಿನ ಮುಂಚಿತವಾಗಿ ಭಾರತಕ್ಕೆ ಆಗಮಿಸಿ ರಷ್ಯಾ ಅಧ್ಯಕ್ಷ ಪುಟಿನ್

ನವದೆಹಲಿ: 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ನವದೆಹಲಿಗೆ ಆಗಮಿಸಿದ್ದಾರೆ. ಗುರುವಾರ ತಡರಾತ್ರಿ ಪಾಲಂ ವಾಯುಪಡೆ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಕೇಂದ್ರ ಸಚಿವ ಕೆ.ವಿ. ಸಿಂಗ್ ಆತ್ಮೀಯವಾಗಿ ಬರಮಾಡಿಕೊಂಡರು. ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತ ಮತ್ತು ರಷ್ಯಾ ನಡುವಿನ ದೀರ್ಘಕಾಲದ ಹಾಗೂ ಬಹುಮುಖ ಸಂಬಂಧವನ್ನು ಉಭಯ ದೇಶಗಳು ಮುಂದುವರಿಸಿಕೊಂಡು ಬಂದಿವೆ. ಈ ಸಂಬಂಧವು ವಿಶೇಷ ಮತ್ತು ವಿಶೇಷಾಧಿಕಾರ ಹೊಂದಿದ ಕಾರ್ಯತಂತ್ರದ ಪಾಲುದಾರಿಕೆಯ ಮೇಲೆ ಆಧಾರಿತವಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಭಾರತದ ಆತಿಥ್ಯದಲ್ಲಿ ಸೆಪ್ಟೆಂಬರ್ 12 ಮತ್ತು 13ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯಲಿದೆ. ಆಹಾರ, ಇಂಧನ, ಆರೋಗ್ಯ, ವಿಪತ್ತು ನಿರ್ವಹಣೆ ಹಾಗೂ ಪ್ರಮುಖ ಪೂರೈಕೆ ಸರಪಳಿಗಳಲ್ಲಿ ಸ್ಥಿತಿಸ್ಥಾಪಕತ್ವ ಹೆಚ್ಚಿಸುವುದು ಸೇರಿದಂತೆ ಹಲವು ಜಾಗತಿಕ ವಿಚಾರಗಳು ಶೃಂಗಸಭೆಯಲ್ಲಿ ಪ್ರಮುಖ ಚರ್ಚೆಯಾಗುವ ನಿರೀಕ್ಷೆಯಿದೆ.

ಪುಟಿನ್ ಅವರು ಭಾರತದಲ್ಲಿ ಮೂರು ದಿನಗಳ ಕಾಲ ತಂಗಲಿದ್ದು, ಬ್ರಿಕ್ಸ್ ಸಭೆಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ರಕ್ಷಣಾ, ಇಂಧನ, ತಂತ್ರಜ್ಞಾನ, ಔಷಧ ಹಾಗೂ ಜನರ ನಡುವಿನ ಸಂಪರ್ಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಣೆ ಕುರಿತು ಉಭಯ ನಾಯಕರು ಚರ್ಚಿಸುವ ಸಾಧ್ಯತೆಯಿದೆ.

ರಷ್ಯಾ-ಉಕ್ರೇನ್ ಯುದ್ಧ, ಮಧ್ಯಪ್ರಾಚ್ಯ ಬಿಕ್ಕಟ್ಟು, ಹೋರ್ಮುಜ್ ಜಲಸಂಧಿಯ ಪರಿಸ್ಥಿತಿ ಹಾಗೂ ಅಮೆರಿಕದ ವ್ಯಾಪಾರ ಮತ್ತು ಸುಂಕ ನೀತಿಗಳಿಂದ ಜಾಗತಿಕ ಆರ್ಥಿಕತೆ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಈ ಶೃಂಗಸಭೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬ್ರಿಕ್ಸ್ ಅನ್ನು ಪರಿಣಾಮಕಾರಿ ಬಹುಪಕ್ಷೀಯ ವೇದಿಕೆಯಾಗಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತ ತನ್ನ ಆದ್ಯತೆಗಳನ್ನು ಮುಂದಿಡಲಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೋಸಾ ಸೇರಿದಂತೆ ಹಲವು ರಾಷ್ಟ್ರಗಳ ಪ್ರಮುಖ ನಾಯಕರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಉಕ್ರೇನ್ ಯುದ್ಧ ಆರಂಭವಾದ 2022ರ ಫೆಬ್ರವರಿ ಬಳಿಕ ರಷ್ಯಾದ ಹೊರಗೆ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪುಟಿನ್ ಅವರು ಮೊದಲ ಬಾರಿಗೆ ಖುದ್ದಾಗಿ ಭಾಗವಹಿಸುತ್ತಿರುವುದು ಈ ಭೇಟಿಯ ಪ್ರಮುಖ ವಿಶೇಷತೆಯಾಗಿದೆ.

By Ravikumar - 11-09-2026


Ads in Post