Search


ಅರ್ಜುನ್‌ ಆಟಕ್ಕೆ ಸಚಿನ್‌ ಭಾವುಕ ಪೋಸ್ಟ್‌; "ನಿನ್ನ ಬಗ್ಗೆ ಹೆಮ್ಮೆಯಿದೆ" ಎಂದ ಕ್ರಿಕೆಟ್‌ ದೇವರು

ಅರ್ಜುನ್‌ ತೆಂಡೂಲ್ಕರ್‌ ಐಪಿಎಲ್‌ 2026ರಲ್ಲಿ ನಿನ್ನೆ ತಮ್ಮ ಚೊಚ್ಚಲ ಪಂದ್ಯವನ್ನಾಡಿದ್ದಾರೆ. ಮೌನವಾಗಿ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದ ಅರ್ಜುನ್‌, ಅವಕಾಶ ಸಿಗುತ್ತಲೇ ತಮ್ಮ ಸಾಮರ್ಥ್ಯವನ್ನ ಮೈದಾನದಲ್ಲಿ ನಿರೂಪಿಸಿದ್ದಾರೆ. ಮಗ ಯಾವಾಗ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಾನೆ ಎಂದು ಮೌನವಾಗಿ ಕಾಯುತ್ತಿದ್ದ ಕ್ರಿಕೆಟ್‌ ದೇವರು, ತಮ್ಮ ಪುತ್ರನ ತಾಳ್ಮೆಯನ್ನ ಮೆಚ್ಚಿ ತಮ್ಮ ಎಕ್ಷ್‌ ಖಾತೆಯಲ್ಲಿ ಮಗನನ್ನ ಕೊಂಡಾಡಿದ್ದಾರೆ, ಹಾಗಾದರೆ ಇಡೀ ಸೀಸನ್‌ನಲ್ಲಿ ಅರ್ಜುನ್‌ ತೆಂಡೂಲ್ಕರ್‌ ತೋರಿದ ತಾಳ್ಮೆ ಎಂತಹದು, ಲೆಜೆಂಡ್‌ ಪುತ್ರನಾಗಿದ್ದರು, ತನ್ನ ಸಾಮರ್ಥ್ಯವನ್ನ ತನ್ನ ಪ್ರತಿಭೆಯಿಂದಲೆ ನಿರೂಪಿಸಬೇಕು ಎಂದು ಮಾಡಿದ ತಪ್ಪಸ್ಸಾದರು ಎಂತಹದು ನೋಡೋಣ ಬನ್ನಿ.


ಐಪಿಎಲ್ 2026ರ ಸಂಪೂರ್ಣ ಸೀಸನ್‌ನಲ್ಲಿ ಅರ್ಜುನ್ ತೆಂಡೂಲ್ಕರ್ ಮೌನವಾಗಿ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದರು. ಪ್ರತಿದಿನ ನೆಟ್ಸ್‌ನಲ್ಲಿ ಬೆವರು ಸುರಿಸುತ್ತಾ, ತಂಡದ ಜೊತೆ ಪ್ರಯಾಣಿಸುತ್ತಿದ್ದರು, ಆದರೆ ಮೈದಾನಕ್ಕಿಳಿಯುವ ಕ್ಷಣ ಮಾತ್ರ ದೂರವಾಗಿಯೇ ಉಳಿದಿತ್ತು. ಆದರೆ ಕೊನೆಗೂ ಶನಿವಾರ ಲಖ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಆ ಕನಸಿನ ಕ್ಷಣ ಬಂದಿತು. ಪವರ್‌ ಪ್ಲೇ ನಂತರ ಬೌಲಿಂಗ್‌ ಮಾಡಲು ಬಂದ ಅರ್ಜುನ್‌ ತಮ್ಮ 15ನೇ ಓವರ್‌ನಲ್ಲಿ ಅದ್ಭುತವಾದ ಯಾರ್ಕರ್‌ ಎಸೆಯುವ ಮೂಲಕ ಪ್ರಭ್‌ಸಿಮ್ರನ್‌ ಸಿಂಗ್‌ರ ವಿಕೆಟ್‌ ಪಡೆದು ಮಿಂಚಿದರು.

2022ರಿಂದ 2025ರವರೆಗೆ ಅರ್ಜುನ್‌ ತೆಂಡೂಲ್ಕರ್‌ ಮುಂಬೈ ಇಂಡಿಯನ್ಸ್ ಪರ ಆಡಿದರು ಕೂಡ ಅವರಿಗೆ ಸಿಕ್ಕಿದ್ದು ಕೇವಲ ಐದು ಪಂದ್ಯಗಳ ಅವಕಾಶ. ಈ ಬಾರಿ ಲಖ್ನೋ ತಂಡದ ಪಾಲಾಗಿದ್ದ ಅರ್ಜುನ್‌ಗೆ ಅಲ್ಲಿಯೂ ಕೂಡ ಇದೇ ಪರಿಸ್ಥಿತಿ ಎದುರಾಗಿತ್ತು.  ಆದರೂ ಅವರು ನಿರಾಶರಾಗಲಿಲ್ಲ. ಯಾರಿಗೂ ಗೊತ್ತಾಗದಂತೆ ಶಾಂತವಾಗಿ ಪರಿಶ್ರಮ ಪಡುತ್ತಲೇ ಇದ್ದರು. ಕೊನೆಯ ಪಂದ್ಯದಲ್ಲಾದರೂ ಅವಕಾಶ ಸಿಗಬಹುದು ಎಂಬ ನಂಬಿಕೆಯನ್ನು ಅವರು ಎಂದಿಗೂ ಕಳೆದುಕೊಳ್ಳಲಿಲ್ಲ.

ಕ್ಯಾಚ್‌ ಕೈಚೆಲ್ಲಿದರು.. ಪ್ರಯತ್ನ ಮುಂದುವರಿಸಿದ ಅರ್ಜುನ್...!

ಪವರ್‌ಪ್ಲೇ ನಂತರ ಬೌಲಿಂಗ್‌ಗೆ ಬಂದ ಅರ್ಜುನ್‌ ತಮ್ಮ ಮೊದಲ ಓವರ್‌ನಲ್ಲೇ ತಮ್ಮ ಸಾಮರ್ಥ್ಯ ತೋರಿಸಿದರು. ಪ್ರಭ್‌ಸಿಮ್ರನ್ ಸಿಂಗ್‌ಗೆ ಬೌನ್ಸರ್ ಎಸೆಯುವ ಮೂಲಕ ವಿಕೆಟ್‌ ಪಡೆಯುವ ಪರಿಸ್ಥಿತಿ ನಿರ್ಮಿಸಿದರು, ಕ್ಯಾಚ್‌ ಕೈಚೆಲ್ಲಲಾಯಿತಾದರೂ ಅರ್ಜುನ್ ಮುಖದಲ್ಲಿ ಯಾವುದೇ ಬೇಸರ ಕಾಣಿಸಲಿಲ್ಲ. ಅವರು ಮತ್ತೆ ತಮ್ಮ ಲಯದಲ್ಲಿ ಬೌಲಿಂಗ್ ಮುಂದುವರಿಸಿದರು.

ಎರಡನೇ ಓವರ್‌ನಲ್ಲಿ ಬೌಂಡರಿ, ಸಿಕ್ಸರ್‌ಗಳನ್ನು ಕೊಟ್ಟರು ಕೂಡ ಕಂಗೆಡದ ಅರ್ಜುನ್ ತಮ್ಮ 15ನೇ ಓವರ್‌ನಲ್ಲಿ ಅದ್ಭುತ ಯಾರ್ಕರ್ ಮೂಲಕ ಪ್ರಭ್‌ಸಿಮ್ರನ್ ಸಿಂಗ್ ಅವರನ್ನು ಎಲ್‌ಬಿಡಬ್ಲ್ಯು ಮಾಡಿದರು. ಆ ಕ್ಷಣ ಕೇವಲ ಒಂದು ವಿಕೆಟ್ ಮಾತ್ರವಾಗಿರಲಿಲ್ಲ...  ಅದು ಹಲವು ವರ್ಷಗಳ ಸಹನೆಯ ಫಲವಾಗಿತ್ತು. 

ಸಚಿನ್‌ ಭಾವನಾತ್ಮಕ ಪೋಸ್ಟ್‌...!

ಪಂದ್ಯದ ನಂತರ ಸಚಿನ್ ತೆಂಡೂಲ್ಕರ್ ಮಗನ ಕುರಿತಾಗಿ ಭಾವುಕ ಪೋಸ್ಟ್‌ವೊಂದನ್ನು ತಮ್ಮ ಎಕ್ಷ್‌ ಖಾತೆಯಲ್ಲಿ ಹಂಚಿಕೊಂಡಿದ್ದು. "“ಅರ್ಜುನ್, ನಿನ್ನ ಮೇಲೆ ಹೆಮ್ಮೆ ಇದೆ. ಈ ಸೀಸನ್‌ನಲ್ಲಿ ನೀನು ತಾಳ್ಮೆಯಿಂದ, ನಿನ್ನ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳದೇ, ಶಾಂತವಾಗಿ ಪರಿಶ್ರಮ ಪಟ್ಟೆ. ಕೊನೆಯ ಪಂದ್ಯವರೆಗೂ ಅವಕಾಶಕ್ಕಾಗಿ ಕಾಯುವುದು ಸುಲಭವಲ್ಲ. ಕ್ರಿಕೆಟ್ ಕೌಶಲ್ಯವನ್ನಷ್ಟೇ ಅಲ್ಲ, ಸಹನೆಯನ್ನು ಕೂಡ ಪರೀಕ್ಷಿಸುತ್ತದೆ. ಇಂದು ನೀನು ಎರಡನ್ನೂ ಸಾಬೀತುಪಡಿಸಿದ್ದೀಯ. ಆಟದ ಮೇಲಿನ ನಿನ್ನ ಪ್ರೀತಿ ಹೀಗೆಯೇ ಇರಲಿ. ನಿನ್ನನ್ನು ಸದಾ ಪ್ರೀತಿಸುತ್ತೇನೆ,” ಎಂದು ಸಚಿನ್ ಭಾವುಕರಾಗಿ ಬರೆದುಕೊಂಡಿದ್ದಾರೆ.

By News Desk - 24-05-2026


Ads in Post