ತಿರುವನಂತಪುರಂ: ಕೇರಳ ಚುನಾವಣಾ ಫಲಿತಾಂಶ ಪ್ರಕಟವಾದ 10 ದಿನಗಳ ನಂತರ ಪಕ್ಷದಿಂದ ಆಯ್ಕೆಯಾದ ಕಾಂಗ್ರೆಸ್‌ನ ವಿ.ಡಿ.ಸತೀಶನ್ ಸೋಮವಾರ ಕೇರಳಂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಪ್ರಮಾಣ ವಚನ ಬೋಧಿಸಿದರು.
ಇನ್ನು ಈ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪ್ರಿಯಾಂಕ ಗಾಂಧಿ, ಕೆ. ಸಿ ವೇಣುಗೋಪಾಲ್, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಡಿ.ಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.
ಆದರೆ ಇವರೆಲ್ಲರ ಜೊತೆಗೆ ಕೇರಳ ನಿರ್ಗಮಿತ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ ಕೂಡ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಸಿಎಂ ವಿ,.ಡಿ ಸತೀಶನ್ ಅವರಿಗೆ ಶುಭಕೋರಿದರು.
ಕಾಂಗ್ರೆಸ್‌ನ 11 ಶಾಸಕರಿಗೆ ಸಂಪುಟದಲ್ಲಿ ಸ್ಥಾನ
ಇನ್ನೂ ಮುಖ್ಯಮಂತ್ರಿ ಹುದ್ದೆಯೊಂದಿಗೆ 11 ಮಂದಿ ಕಾಂಗ್ರೆಸ್ ಶಾಸಕರು ಕೇರಳ ನೂತನ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇದರೊಂದಿಗೆ ಭಾರತೀಯ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನ ಐವರು, ಕೇರಳ ಕಾಂಗ್ರೆಸ್ (ಜೋಸೆಫ್), ಕ್ರಾಂತಿಕಾರಿ ಸಮಾಜವಾದಿ ಪಕ್ಷ (ಆರ್‌ಎಸ್‌ಪಿ), ಕೇರಳ ಕಾಂಗ್ರೆಸ್ (ಜಾಕೋಬ್) ಮತ್ತು ಕಮ್ಯುನಿಸ್ಟ್ ಮಾರ್ಕ್ಸ್ ಪಕ್ಷ (ಸಿಎಂಪಿ) ಗಳು ತಲಾ ಒಂದು ಸ್ಥಾನ ಪಡೆದಿವೆ.
ಸಚಿವರು ಯಾರ್ಯಾರು?
ರಮೇಶ್ ಚೆನ್ನಿತ್ತಲ, ಸನ್ನಿ ಜೋಸೆಫ್, ಕೆ ಮುರಳೀಧರನ್, ಎ ಪಿ ಅನಿಲ್ ಕುಮಾರ್, ಪಿ.ಸಿ ವಿಷ್ಣುನಾಧ್, ಬಿಂಧು ಕೃಷ್ಣ, ಎಂ ಲಿಜ್ಜು, ಟಿ ಸಿದ್ದಿಕ್, ರೋಜಿ ಎಂ. ಜಾನ್, ಕೆ.ಎ ತುಳಸಿ ಮತ್ತು ಒ.ಜೆ ಜನೀಶ್ ಕಾಂಗ್ರೆಸ್ ಸಚಿವರಾಗಿದ್ದಾರೆ. ಜೊತೆಗೆ ಪಿ.ಕೆ ಕುನ್ಹಾಲಿಕುಟ್ಟಿ, ಕೆ.ಎಂ ಶಾಜಿ, ಎನ್ ಶಂಸುದ್ದೀನ್, ಪಿ.ಕೆ ಬಶೀರ್ ಮತ್ತು ವಿ.ಇ ಅಬ್ದುಲ್ ಗಫೂರ್. ಮಾನ್ಸ್ ಜೋಸೆಫ್ (ಕೆಸಿ-ಜೋಸೆಫ್), ಅನೂಪ್ ಜೇಕಬ್ (ಕೆಸಿ-ಜೇಕಬ್), ಶಿಬು ಬೇಬಿ ಜಾನ್ (ಆರ್‌ಎಸ್‌ಪಿ) ಮತ್ತು ಸಿಪಿ ಜಾನ್ (ಸಿಎಂಪಿ) ಇತರ ಸಚಿವರು ನಾಮನಿರ್ದೇಶನಗೊಂಡಿದ್ದಾರೆ.